Mysore
23
broken clouds
Light
Dark

ಎಚ್‌ಡಿಕೆ ಕೇಂದ್ರ ಸಚಿವರಾದ ಬೆನ್ನಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್‌ ಕುಮಾರಸ್ವಾಮಿ ಸಜ್ಜು.?

ಬೆಂಗಳೂರು: ಕೇಂದ್ರ ಸಚಿವರಾಗಿ ಕಾರ್ಯಭಾರ ವಹಿಸಿಕೊಂಡಿರುವ ಹಾಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹೆಗಲ ಮೇಲಿರುವ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸಲು ಪುತ್ರ ನಿಖಿಲ್‌ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹೊತ್ತಿನಲ್ಲಿ ಅಥವಾ ನಂತರ ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವ ನಿರೀಕ್ಷೆಯಿದ್ದು, ಆ ಸ್ಥಾನಕ್ಕೆ ನಿಖಿಲ್‌ ಈಗಿನಿಂದಲೇ ನಾಯಕತ್ವದ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಕುಟುಂಬ ರಾಜಕಾರಣದ ಟೀಕೆ ಕೇಳಿಬರಬಹುದು ಎಂಬ ಕಾರಣಕ್ಕಾಗಿ ಹಿಂದೇಟು ಹಾಕಿದಲಿ ನಿಖಿಲ್‌ ಅವರ ಬದಲು ಬೇರೊಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬಹುದು. ಆದರೂ ನಿಖಿಲ್‌ಗೆ ಕಾರ್ಯಾಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ.

ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ.ರೇವಣ್ಣ ಅವರ ಕುಟುಂಬ ಈಗ ಆರೋಪಗಳ ಸುಳಿಯಲ್ಲಿ ಸಿಲುಕಿ ಇಬ್ಬರೂ ಪುತ್ರರು ಜೈಲುಪಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿಯೇ ಮುಂದೆ ಪಕ್ಷವನ್ನು ನಿಭಾಯಿಸಲಿ ಎಂಬ ಅಭಿಪ್ರಾಯ ಸಹಜವಾಗಿಯೇ ಪಕ್ಷದ ಕಾರ್ಯಕರ್ತರಲ್ಲಿ ಮೂಡುತ್ತಿದೆ.

ಕಳೆದ ಲೋಕಸಭಾ ಚುನಾವಣೆಗೂ ಮೊದಲೇ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಮುಖ ಚಟುವಟಿಕೆಗಳಲ್ಲಿ ಪುತ್ರ ನಿಖಿಲ್‌ರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಶುರು ಮಾಡಿದರು. ಪಕ್ಷದ ಪ್ರತಿಯೊಂದು ಸಭೆ, ಮಹತ್ವದ ಮಾತುಕತೆಗಳಲ್ಲಿ ಇತರ ಮುಖಂಡರ ಬದಲು ನಿಖಿಲ್‌ ಅವರನ್ನೇ ಕರೆದೊಯ್ಯುತ್ತಿದ್ದರು.

ಎಲ್ಲೇ ಸಭೆ ನಡೆದರೂ ನಿಖಿಲ್‌ ಉಪಸ್ಥಿತಿ ಕಡ್ಡಾಯ ಎಂಬಂತಾಗಿತ್ತು. ತಂದೆ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆಗಳನ್ನು ನಿಖಿಲ್‌ ನಡೆಸಿದ್ದರು. ಹೀಗಾಗಿ ಅವರೇ ಮುಂದಿನ ರಾಜ್ಯಾಧ್ಯಕ್ಷರಾಗಲು ಸೂಕ್ತ ಎಂಬ ನಿಲುವು ಪಕ್ಷದಲ್ಲಿ ಕಂಡು ಬಂದಿತು. ಚುನಾವಣೆ ಬಳಿಕವೂ ನಿಖಿಲ್‌ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.