ಮಂಗಳೂರು: ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರು ನಕ್ಸಲರು ಪೊಲೀಸರಿಗೆ ಶರಣಾಗಿದ್ದು ಅವರನ್ನು ಕಾಡಿನಿಂದ ನ್ಯಾಯಾಲಯಕ್ಕೆ ಕರೆತಂದು, ಅಲ್ಲಿಂದ ನಾಡಿಗೆ ಕರೆತರುವ ಪ್ರಯತ್ನ ಯಶಸ್ವಿಯಾಗಿದೆ. ನಕ್ಸಲರು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಿ ಮುಖ್ಯವಾಹಿನಿಗೆ ಬರಬೇಕು. ಶಾಂತಿಯುತ ಹೋರಾಟಕ್ಕೆ ನಮ್ಮ ತಕರಾರೇನಿಲ್ಲ. ಸಂವಿಧಾನದಲ್ಲಿ ಶಾಂತಿಯುತ ಹೋರಾಟಕ್ಕೆ ಅವಕಾಶವಿದ್ದು, ಅದರಂತೆ ಹೋರಾಟ ಮಾಡಿದರೆ ಅದಕ್ಕೆ ಸಹಕಾರವಿದೆ ಎಂದು ತಿಳಿಸಿದರು.
ನಕ್ಸಲರ ಶರಣಾಗತಿಯ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ನೌಕರರಾಗಿದ್ದರು. ಈಗ ರಾಜಕೀಯದಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಅವರಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕಗಳ ಜೊತೆಗೆ 10 ಸಾವಿರ ರೂ.ಗಳ ಗೌರವಧನ ನೀಡಲು ಸರ್ಕಾರ ಒಪ್ಪಿದೆ. ಒಂದು ವೇಳೆ 10 ಸಾವಿರಗಳಷ್ಟು ಪ್ರೋತ್ಸಾಹಕಗಳು ಬಾರದೆ ಹೋದರೆ ಸರ್ಕಾರವೇ ಅದನ್ನು ಭರಿಸಲಿದೆ ಎಂದರು.