ದಾವಣಗೆರೆ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲಿನ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಉದಯಗಿರಿ ಪ್ರದೇಶದಲ್ಲಿ ನಡೆದ ಘಟನೆ ತೀವ್ರ ಆತಂಕಕಾರಿ. ಈ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದ ವಿಚಾರ ಇದಕ್ಕೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಗೂಂಡಾಗಿರಿ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ನಡೆಸಿದ ಪರಿಣಾಮ 14 ಜನರಿಗೆ ಗಾಯಗಳಾಗಿವೆ. ಇಂತಹ ಘಟನೆಗಳು ಮೈಸೂರಿನಲ್ಲಿ ಹೊಸದೇನಲ್ಲ. ತಪ್ಪು ಮಾಡಿರುವವರ ವಿರುದ್ಧ ಸಣ್ಣಪುಟ್ಟ ಪ್ರಕರಣ ದಾಖಲಿಸಿದರೆ ಸಾಲದು. ಗಂಭೀರ ಪ್ರಕರಣ ದಾಖಲಿಸಿ ವರ್ಷಗಟ್ಟಲೇ ಜೈಲಿನಲ್ಲಿಟ್ಟರೆ ಬುದ್ಧಿ ಬರುತ್ತದೆ. ಇವರೆಲ್ಲಾ ಸೇರಿಕೊಂಡು 2047ರ ವೇಳೆಗೆ ಈ ದೇಶವನ್ನು ಎರಡನೇ ಪಾಕಿಸ್ತಾನ ಮಾಡುವ ಘೋಷಣೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.