Mysore
26
scattered clouds
Light
Dark

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಆರ್.ಅಶೋಕ್‌ ಆಗ್ರಹ

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಡಾ ಹಗರಣ ಆಗಿಯೇ ಇಲ್ಲ ಎಂದವರು ಈ ಹಿಂದಿನ ಆಯುಕ್ತರನ್ನು ಯಾಕೆ ಅಮಾನತು ಮಾಡಿದ್ರಿ?. ಇದರಿಂದ ಮುಡಾದಲ್ಲಿ ಹಗರಣ ಆಗಿರುವುದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಕೇವಲ ಒಂದು ವರ್ಷದಲ್ಲೇ ಅನೇಕ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದು ನಾಚಿಕೆಗೇಡು. ಮುಡಾದಲ್ಲಿ ದೊಡ್ಡ ಅಕ್ರಮ ಆಗಿರುವುದು ಸಾಬೀತಾಗಿದೆ. ಈಗ ಮುಡಾ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.

50:50 ಅನುಪಾತವೇ ಅಕ್ರಮ ಆಗಿದೆ ಎಂದು ಅಮಾನತು ಮಾಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಇದೆಲ್ಲಾ ನಡೆದಿದ್ದರೂ ಪದೇ ಪದೇ ರಾಜ್ಯಪಾಲರ ವಿರುದ್ಧ ಮಾತನಾಡುತ್ತಿದ್ದಾರೆ. ಕೋರ್ಟ್‌ ಸಹ ಎಲ್ಲವನ್ನೂ ನೋಡುತ್ತಿದೆ. ಕೋರ್ಟ್‌ ಜನರ ಹಣ ಉಳಿಸೋ ಕೆಲಸ ಮಾಡುವ ವಿಶ್ವಾಸವಿದೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ದರು. ಅದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.