Mysore
24
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಕರೆದು ಕೆಲಸ ಶುರು ಮಾಡಲಾಗುವುದು. ತೆರವು ಕಾರ್ಯಾಚರಣೆಯಿಂದ ಹಾನಿಯಾಗಿರುವ ರಾಜಮಾರ್ಗದ ಫುಟ್‌ಪಾತ್ ದುರಸ್ತಿ ಕೆಲಸವೂ ಈ ಅನುದಾನದಲ್ಲೇ ಆಗಬೇಕು. ರಸ್ತೆ ಸಂಚಾರದ ಕುರಿತು ಪೊಲೀಸ್ ಇಲಾಖೆ ಕೆಲಸವನ್ನೂ ಸೇರಿಸಿಕೊಳ್ಳಬೇಕು ಎಂದು ನಗರಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ನಿರ್ದೇಶನ ನೀಡಿದರು.

ಸೋಮವಾರ ನಗರಪಾಲಿಕೆ ಪ್ರಗತಿಪರಿಶೀಲನಾ ಸಭೆ ನಡೆಸಿದ ಅವರು, ಜಿಬಿಎ ಮಾದರಿಯಲ್ಲಿ ನಗರದಲ್ಲಿ ನಿಲುಗಡೆ ಮಾಡಿರುವ ಅನಾಥ ವಾಹನಗಳನ್ನು ತೆರವು ಮಾಡುವಂತೆ ತಾಕೀತು ಮಾಡಿದರು.

ಶೌಚಾಲಯ ದುರಸ್ತಿಗೊಳಿಸಿ
ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ಸಮಗ್ರವಾಗಿ ದುರಸ್ತಿ ಮಾಡಿ, ಬಳಕೆಗೆ ಯೋಗ್ಯವಾಗಿರುವಂತೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಒಪಿ ರಚನೆ
ಈ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ಪಾಲಿಕೆಯಿಂದಲೇ ಪ್ರಮಾಣಿತ ಕಾರ್ಯವಿಧಾನವನ್ನು(ಎಸ್‌ಒಪಿ) ರಚನೆ ಮಾಡಲಾಗವುದು. ಆ ಪ್ರಕಾರ ಪಾಲಿಕೆಯ ಎಲ್ಲ ವಲಯಗಳಲ್ಲೂ ಕೆಲಸವಾಗಬೇಕು. ಇದಕ್ಕೆ ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಜವಾಬ್ದಾರಿ ಎಂದು ನಗರ ಪಾಲಿಕೆ ಆಯುಕ್ತರಾದ ಎಂ.ಕೆ.ಸವಿತಾ ತಿಳಿಸಿದರು.

ನಗರದ ಪ್ರಮುಖ ರಸ್ತೆಗಳು, ವಾಣಿಜ್ಯ ಪ್ರದೇಶದಲ್ಲಿರುವ ರಸ್ತೆಯ ಫುಟ್‌ಪಾತ್ ಒತ್ತುವರಿ ತೆರವಿಗೆ ಆದ್ಯತೆ ಕೊಡಬೇಕು. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳು, ಅಪಘಾತ ಆಗುವ ಸಾಧ್ಯತೆ ಇರುವ ಕಡೆ ಮೊದಲು ಕೆಲಸ ಆಗಬೇಕು. ಸಯ್ಯಾಜಿರಾವ್ ರಸ್ತೆ, ಮೀನಾ ಬಜಾರ್ ಸೇರಿದಂತೆ ಹಲವು ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿದೆ. ಇದರ ಹಿಂದೆ ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಈ ಸ್ಥಳಗಳಲ್ಲಿ ಕಾರ್ಯಾಚರಣೆ ನಿರಂತರವಾಗಿ ನಡೆಸಿ ಎಂದು ಸೂಚನೆ ನೀಡಿದರು.

ಡಿಸಿಪಿ ಸುಂದರ್‌ರಾಜ್ ಮಾತನಾಡಿ, ಪಾಲಿಕೆ ಕೈಗೊಂಡಿರುವ ಈ ಕಾರ್ಯಾಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ಕೊಡಲಾಗುವುದು. ಅಗತ್ಯ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು ಎಂದು ತಿಳಿಸಿದರು. ಎಸಿಪಿ ಶಿವಶಂಕರ್, ಪಾಲಿಕೆ ಹೆಚ್ಚುವರಿ ಆಯುಕ್ತರಾದ ವೀಣಾ ಇನ್ನಿತರರು ಹಾಜರಿದ್ದರು.

 

 

 

Tags:
error: Content is protected !!