ಬೆಂಗಳೂರು: ಮೈಸೂರು ಮುಡಾ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಹೊರಡಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.
ಮೈಸೂರು ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ಶ್ರೀಮತಿ ಪಾರ್ವತಿಯವರ ವಿರುದ್ಧ ತನಿಖೆ ನಡೆಸಲು ಇಡಿ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿ ನೀಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರಕ್ಕೆ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ.
ಸುಪ್ರೀಂಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿನೋದಚಂದ್ರ ಅವರ ಆದೇಶವನ್ನು ನಾನು ವಿನೀತವಾಗಿ ಸ್ವಾಗತಿಸುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು. ಈ ನಂಬಿಕೆಯನ್ನು ಸುಪ್ರೀಂಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ.
ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದದ್ದು. ಇದರಿಂದ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಮಾನಸಿಕವಾದ ಕಿರುಕುಳವನ್ನು ನಾನೆಂದೂ ಮರೆಯಲಾರೆ.
ಸುಪ್ರೀಂಕೋರ್ಟ್ ಈ ಕಣ್ಣು ತೆರೆಸುವ ಆದೇಶದ ನಂತರವಾದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಎಚ್ಚೆತ್ತುಕೊಂಡು ಐಟಿ, ಸಿಬಿಐ ಹಾಗೂ ಇಡಿಯಂತಹ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯನ್ನು ನಿಲ್ಲಿಸಿ ಅವುಗಳಿಗೆ ಇರಬೇಕಾಗಿರುವ ಸ್ವಾಯತ್ತತೆಯನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.





