ಮಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೋರ್ಟ್ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಪಘಾತ ಮಾಡಿದಾಗ ರಾಜೀನಾಮೆ ನೀಡಿದ್ದರು. ಒಬ್ಬ ವ್ಯಕ್ತಿ ರಾಜೀನಾಮೆ ನೀಡಬೇಕೋ, ನೀಡಬಾರದೋ ಅನ್ನೋದು ಅವರಿಗೆ ಬಿಟ್ಟ ವಿಷಯ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ರಾಜೀನಾಮೆ ನೀಡಬೇಕು. ಅದೇ ರೀತಿ ರಾಜೀನಾಮೆ ನೀಡದಿದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಸಹ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಎಂದು ಹೇಳಿದೆ. ಆದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಕೊಡಬೇಕು ಎನಿಸುತ್ತದೆ. ಆದರೆ ರಾಜೀನಾಮೆ ಕೊಡಬೇಕಾ? ಅಥವಾ ಕೊಡಬಾರದಾ ಎನ್ನುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು. ತನಿಖೆಯ ಬಗ್ಗೆ ಯಾವ ತನಿಖಾ ಸಮಿತಿ ಉತ್ತಮವೆಂದು ಹೇಳಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಯಾವುದೇ ತನಿಖಾ ಸಮಿತಿ ಈ ಬಗ್ಗೆ ವಿಚಾರಣೆ ನಡೆಸಬಹುದು ಎಂದರು.
ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಪಿಯಲ್ಲ ನಿರ್ದೋಷಿ ಎಂದು ತೀರ್ಪು ಬಂದರೆ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ. ಹೈಕೋರ್ಟ್ ತೀರ್ಪಿಗೂ ಮುನ್ನ ನಾನು ತಪ್ಪೇ ಮಾಡಿಲ್ಲ ಎಂಬಂತೆ ಹೇಳಿದ್ದರು. ಆದರೆ, ಇದೀಗ ಕೋರ್ಟ್ ತೀರ್ಪಿನ ಪ್ರಕಾರ ಮೇಲ್ನೋಟಕ್ಕೆ ತಪ್ಪು ಕಂಡು ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಹೇಳಿದ್ದು ಸರಿಯಲ್ಲವೆಂದು ಆಯ್ತಲ್ಲ ಎಂದು ಹೇಳಿದ್ದಾರೆ.