Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಮೋದಿ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ರೈಲು : ಕೇಂದ್ರ ಸಚಿವ ಎಚ್‌ಡಿಕೆ

ಬೆಂಗಳೂರು : ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತೀಯ ರೈಲ್ವೆ ವಲಯದಲ್ಲಿ ಪರಿವರ್ತನಾತ್ಮಕ ಹೆಜ್ಜೆ ಆಗಿದ್ದು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ರೈಲ್ವೆ ವ್ಯವಸ್ಥೆ ಉತ್ಕೃಷ್ಟತೆಯತ್ತ ಸಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು’ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಶನಿವಾರ ಸಂಜೆ ಸ್ವಾಗತಿಸಿ ಸಚಿವರು ಮಾತನಾಡಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಕನಸು ಕಂಡವರೇ ಅದನ್ನು ಸಾಕಾರಗೊಳಿಸುತ್ತಿರುವ ಧೃಢ ಸಂಕಲ್ಪದ ನಿದರ್ಶನ ಇದಾಗಿದೆ. ಕರ್ನಾಟಕಕ್ಕೆ ಈವರೆಗೆ ಬಂದಿರುವ ಏಳನೇ ವಂದೇ ಭಾರತ್ ರೈಲು ಇದಾಗಿದೆ ಎಂದು ಸಚಿವರು ಹೇಳಿದರು.

ಭಾರತದಲ್ಲಿ ವಿಶ್ವ ದರ್ಜೆಯ ರೈಲುಗಳ ಲೋಕಾರ್ಪಣೆಯಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ವಂದೇ ಭಾರತ್ ರೈಲನ್ನು ಗುರುತಿಸಬಹುದಾಗಿದೆ. ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲೋಕಾರ್ಪಣೆ ಮಾಡಿದರು. ಇದು ಆಧುನಿಕ ರೈಲು ಮೂಲಸೌಕರ್ಯದ ಮೇಲೆ ರಾಷ್ಟ್ರೀಯ ಮಹತ್ವವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯುವ ಹೆಜ್ಜೆಯಾಗಿದೆ ಎಂದು ಸಚಿವರು ನುಡಿದರು.

ಇದನ್ನು ಓದಿ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ವಂದೇ ಭಾರತ್ ರೈಲುಗಳ ತಾಂತ್ರಿಕ ಉತ್ಕೃಷ್ಟತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಚಿವರು, “ಈ ರೈಲು ನಮ್ಮದೇ ಆದ ಎಂಜಿನಿಯರ್‌ಗಳು ಮತ್ತು ಉದ್ಯಮದ ಶ್ರೇಷ್ಠತೆಯಿಂದ ವಿನ್ಯಾಸಗೊಳಿಸಲ್ಪಟ್ಟ, ನಿರ್ಮಿಸಲ್ಪಟ್ಟ ಮತ್ತು ಪರಿಪೂರ್ಣಗೊಳಿಸಲ್ಪಟ್ಟ ರೈಲು ಆಗಿದೆ. ಪ್ರಧಾನಿಗಳ ಮಹತ್ವಾಕಾಂಕ್ಷೆಯ ಅನಿರ್ಭರ ಭಾರತ, ವಿಕಸಿತ ಭಾರತ ಪರಿಕಲ್ಪನೆಗಳ ಸಾಕಾರವಾಗಿ ಈ ರೈಲುಗಳು ಕಾಣುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮೋದಿ ಅವಧಿಯಲ್ಲಿ ರಾಜ್ಯ ಹೆಚ್ಚು ರೈಲ್ವೆ ಅನುಕೂಲ
ನರೇಂದ್ರ ಮೋದಿ ಅವರು ಪ್ರಧಾನಿಗಳಾದ ರಾಜ್ಯಕ್ಕೆ ಕೇಂದ್ರದಿಂದ ಅತಿಹೆಚ್ಚು ರೈಲ್ವೆ ಅನುಕೂಲ ಆಗುತ್ತಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ಕಳೆದ ಬಜೆಟ್ ನಲ್ಲಿ ರಾಜ್ಯಕ್ಕೆ ₹7,564 ಕೋಟಿಗೂ ಹೆಚ್ಚಿನ ಅನುದಾನ ದೊರೆತಿದೆ. ಪ್ರತೀ ವರ್ಷವೂ ಹೊಸ ರೈಲುಗಳು ದೊರೆಯುತ್ತಿದೆ. ರಾಜ್ಯದ ಬಹುತೇಕ ರೈಲ್ವೆ ಮಾರ್ಗವು ವಿದ್ಯುದ್ದೀಕರಣ ಆಗಿದೆ. 2025ರ ವೇಳೆಗೆ ಶೇ. 100ರಷ್ಟು ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ ಎಂದು ಒತ್ತಿ ಹೇಳಿದರು.

ಸಂಸದರಾದ ಪಿ.ಸಿ. ಮೋಹನ್, ಲೆಹರ್ ಸಿಂಗ್ ಸಿರೋಯ ಮತ್ತು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು, ರೈಲ್ವೆ ಎಂಜಿನಿಯರ್‌ಗಳು, ಸಿಬ್ಬಂದಿ ಮತ್ತು ಸಾರ್ವಜನಿಕ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!