ನವದೆಹಲಿ: ಬಿಜೆಪಿ ಹೈಕಮಾಂಡ್ ನೀಡಿರುವ ಶೋಕಾಸ್ ನೋಟಿಸ್‌ಗೆ ಆರು ಪುಟಗಳ ಉತ್ತರ ಸಿದ್ಧವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು(ಡಿ.4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ನಿಂದ ನನಗೆ ಬಂದಿರುವ ನೋಟಿಸ್‌ನ ಎಲ್ಲಾ ಪ್ರಶ್ನೆಗಳಿಗೂ ಸಮಗ್ರವಾಗಿ ಆರು ಪುಟಗಳ ವಿವರಣೆಯನ್ನು ಉತ್ತರದ ಮೂಲಕ ನೀಡಲಾಗುವುದು. ಆದರೆ ಹೈಕಮಾಂಡ್‌ಗೆ ನಾನು ರಾಜ್ಯ ಬಿಜೆಪಿ ಪಕ್ಷದ ಬಗ್ಗೆ ಯಾವುದೇ ರೀತಿಯ ದೂರುಗಳನ್ನು ನೀಡಿಲ್ಲ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜ್ಯ ಬಿಜೆಪಿ ನಾಯಕರೊಂದಿಗೆ ಗುಂಪು ಕಟ್ಟಿಕೊಂಡಿದ್ದಾರೆ. ಈ ವಿಚಾರವಾಗಿ ಕುಟುಂಬ ರಾಜಕಾರಣದ ವಿರುದ್ಧದ ನನ್ನ ಹೋರಾಟದಲ್ಕಿ ಯಾವುದೇ ರಾಜಿ ಇಲ್ಲ. ಯಡಿಯೂರಪ್ಪರವರ ಕುಟುಂಬ ರಾಜಕಾರಣದಿಂದ ಅನೇಕರಿಗೆ ಬೇಸರ ಉಂಟಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯನ್ನು ತನ್ನ ತಾಯಿಯಂತೆ ಭಾವಿಸುವ ನಾಯಕರು ಪಕ್ಷಕ್ಕೆ ಬೇಕು. ನಾನು ಎಂದಿಗೂ ಬಿಜೆಪಿ ವಿರುದ್ಧ ಮಾತನಾಡಿಲ್ಲ, ಆದರೆ ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ವರಿಷ್ಠರಿಗೆ ದೂರು ನೀಡುತ್ತೇನೆ. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ರಹಿತ ಕುಟುಂಬವಾದ ರಹಿತ ಪಕ್ಷವಿರಬೇಕು ಎಂದು ತಿಳಿಸಿದ್ದಾರೆ.