ಚಿಕ್ಕಮಗಳೂರು: ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ದುರದೃಷ್ಟಕರ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಮತ್ತು ದೌರ್ಬಲ್ಯ ಇದ್ದೇ ಇರುತ್ತದೆ. ಅದನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ. ಯತ್ನಾಳ್ ಕೂಡ ಓರ್ವ ಬಲಿಷ್ಠ ನಾಯಕ. ಪಕ್ಷ ಹಲವು ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದೆ ಎಂದರು.
ಇನ್ನು ಯತ್ನಾಳ್ ಬಿಜೆಪಿ ಬಗ್ಗೆ ಮಾತನಾಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಮಾತನಾಡಿದರೆ ಅವರವರ ಭಾವಕ್ಕೆ ಗ್ರಹಿಸುತ್ತಾರೆ. ಸತ್ಯ ಹೇಳಿದರೆ ಗ್ರಹಿಸುವವರು ಸತ್ಯವನ್ನೇ ಗ್ರಹಿಸುತ್ತಾರೆಂದು ಇಲ್ಲ. ಸಂದರ್ಭಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಗ್ರಹಿಸುತ್ತಾರೆ ಎಂದರು.