ಬೆಂಗಳೂರು: ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಶೈಲ್ ಅವರನ್ನು ಇಡಿ ಬಂಧಿಸುವ ಅಗತ್ಯ ಇರಲಿಲ್ಲ. ಕಾಂಗ್ರೆಸ್ಸಿಗರನ್ನು ಮಾತ್ರ ಆಯ್ದು ತೊಂದರೆ ಕೊಡುವ ಕೆಲಸಗಳಾಗುತ್ತಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದರಿ ಶಾಸಕರ ವಿರುದ್ಧ 2010ರಿಂದಲೂ ಪ್ರಕರಣ ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ಈಗ ಬಂಧಿಸಲಾಗಿದೆ. ಕಾಂಗ್ರೆಸ್ಸಿಗರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಇಂತಹ ಕಾರ್ಯಚರಣೆಗಳಾಗುತ್ತಿವೆ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ವೇಳೆ ನಡೆದಿರುವ ಗಲಾಟೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿರುವುದನ್ನು ನೋಡಿದ್ದೇನೆ. ನಾನು ಊರಿನಲ್ಲಿ ಇರಲಿಲ್ಲ, ಹೆಚ್ಚಿನ ಮಾಹಿತಿ ತಿಳಿದುಕೊಂಡ ಬಳಿಕ ಹೇಳಿಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಮದ್ದೂರಿಗೆ ಭೇಟಿ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಯವರು, ಅವರಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೆ ಕೆಲಸ ಇಲ್ಲ. ಜನರನ್ನು ವಿಭಜಿಸುವುದು, ಬೆಂಕಿ ಹಚ್ಚುವುದೇ ಉದ್ಯೋಗವಾಗಿದೆ. ಬಿಜೆಪಿಯವರಿಗೆ ಜನಪರ ಕಾಳಜಿ ಇದ್ದರೆ, ದೆಹಲಿಗೆ ಹೋಗಿ ಕೇಂದ್ರ ಸರ್ಕಾರದಿಂದ ಅನುದಾನ ತರಲಿ, ನರೇಗಾ ಯೋಜನೆಯ ಬಾಕಿ ಬಿಡುಗಡೆ ಮಾಡಿಸಲಿ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಿ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮೋದನೆ ಕೊಡಿಸಲಿ ಎಂದು ತಿರುಗೇಟು ನೀಡಿದರು.





