ಬೆಂಗಳೂರು: ಸತೀಶ್ ಜಾರಕಿಹೊಳಿಯನ್ನು ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಆಪರೇಷನ್ ಎಂದು ಶಾಸಕ ಜನಾರ್ಧನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಶ್ರೀರಾಮುಲು ಅವರು ರಾಧಾ ಮೋಹನ್ ದಾಸ್ ಎದುರೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಸಭೆಯಿಂದ ಹೊರನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶ್ರೀರಾಮುಲು ಅವರು, ಪಕ್ಷ ಬಿಡುವ ಸುಳಿವನ್ನು ಸಹ ನೀಡಿ, ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ ಅವರು, ಡಿ.ಕೆ.ಶಿವಕುಮಾರ್ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು ಶ್ರೀರಾಮುಲು ಅವರು ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಪಕ್ಷ ಬಿಟ್ಟು ಹೋಗಲಿ. ಪಕ್ಷ ಬಿಟ್ಟು ಹೋಗುವಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ತಿರುಗೇಟು ನೀಡಿದರು.