ಬೆಂಗಳೂರು: ನೀಟ್ ಆಕಾಂಕ್ಷಿಗಳ ಸಂಖ್ಯೆ ಮತ್ತು ಲಭ್ಯವಿರುವ ವೈದ್ಯಕೀಯ ಸೀಟುಗಳ ನಡುವಿನ ಅಂತರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಮ್ಮ ಸರ್ಕಾರವು ದೇಶಾದ್ಯಂತ ಪದವಿ ಪೂರ್ವ ವೈದ್ಯಕೀಯ ಸೀಟುಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಆಗ್ರಹಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2019ರ ಬ್ಯಾಚ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು. ಭಾರತದಲ್ಲಿ ತರಬೇತಿ ಪಡೆಯಲಿರುವ ವೈದ್ಯರು ವಿದೇಶದಲ್ಲಿಯೂ ಹೆಚ್ಚು ಮನ್ನಣೆ ಗಳಿಸುತ್ತಿದ್ದಾರೆ. ನಮ್ಮ ವೈದ್ಯರು ಜಗತ್ತಿನ ಎಲ್ಲೆಡೆ ಚಿಕಿತ್ಸೆ ಒದಗಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತೀಯ ವೈದ್ಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಜಾಗತಿಕವಾಗಿ ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಮತ್ತು ಲಭ್ಯತೆಯ ಅಂತರ ಕಡಿಮೆ ಮಾಡಲು ಎನ್‌ಎಂಸಿ ಮಧ್ಯಪ್ರವೇಶಿಸಬೇಕು ಎಂದು ತಿಳಿಸಿದರು.





