ಬೆಂಗಳೂರು :ಆರ್‌ಎಸ್‌ಎಸ್ ದಂಡವನ್ನು ಹಿಡಿದು ಪಥಸಂಚಲನ ನಡೆಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್‍ಖರ್ಗೆ ಆರ್‍ಎಸ್‍ಎಸ್‍ನ ನೋಂದಣಿ ದಾಖಲೆ ಪತ್ರಗಳನ್ನು ಬಹಿರಂಗ ಪಡಿಸುವಂತೆ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಸ್ವಯಂಸೇವಕ ಸಂಘವಾಗಿದ್ದರೆ, ಅದರ ನೋಂದಣಿ ಪತ್ರವನ್ನು ತೋರಿಸಲಿ, ಅವರಿಗೆ ಯಾವ ಮೂಲದಿಂದ ಹಣ ಬರುತ್ತದೆ. 300, 400 ಕೋಟಿ ರೂ. ಗಳಷ್ಟು ಆಸ್ತಿಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಸರ್ಕಾರಿ ಜಾಗದಲ್ಲಿ ಆರ್‍ಎಸ್‍ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಬರೆದಿರುವ ಪತ್ರವನ್ನು ಸಮರ್ಥಿಸಿಕೊಂಡ ಅವರು, ನಾನು ಆರ್‍ಎಸ್‍ಎಸ್ ಅನ್ನು ನಿಷೇಧಿಸಬೇಕೆಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿ ಎಂದರು.
ಮೋಸ್ಟ್ ಸೀಕ್ರೇಟ್ ಆರ್ಗನೈಸೇಷನ್ ಆರ್ ಎಸ್ ಎಸ್ ಆಗಿದ್ದು, ಬಿಜೆಪಿ ಆರ್ ಎಸ್ ಎಸ್‍ನ ಕೈಗೊಂಬೆಯಾಗಿದೆ. ಆರ್‍ಎಸ್‍ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್ ಎಸ್ ಎಸ್ ಶೂನ್ಯ. ನಾನು ಒಬ್ಬ ಹಿಂದು. ಹಿಂದೂ ಧರ್ಮದ ವಿರೋಧಿ ಅಲ್ಲ. ಆದರೆ ಆರ್ ಎಸ್ ಎಸ್ ನ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪರಿಶೀಲಿಸಿದರೆ ವಾಸ್ತವಾಂಶ ತಿಳಿಯಲಿದೆ ಎಂದರು.
ಚುನಾವಣೆ ಬಂದಾಗ ಗಣವೇಶ ಹಾಕುತ್ತಾರೆ. ನಿನ್ನೆ ಮುನಿರತ್ನ ಅವರು ಗಣವೇಶ ಹಾಕಿದ್ದರು. ಗಾಂಧೀಜಿಯವರ ಫೋಟೋ ಹಿಡಿದಿದ್ದರು. ಅವರಿಗೆ ಇತಿಹಾಸವೇ ಗೊತ್ತಿಲ್ಲ, ಗಾಂಧಿಜೀ ಕೊಂದವರು ಅವರ ಫೋಟೋ ಹಿಡಿದಿದ್ದಾರೆ. ನಮಲ್ಲಿ ಒಡಕು ಸೃಷ್ಠಿಮಾಡುವುದು ಅವರ ಉದ್ದೇಶ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ:-ಊಟಕ್ಕೆ ಸೇರುವುದೇ ಅಪರಾಧವೇ..? : ಸಿಎಂ ಕಿಡಿ
ಬೇರೆ ಸಂಘಟನೆಗಳು ದೊಣ್ಣೆ ಹಿಡಿದು ಓಡಾಡಿದರೆ ಒಪ್ಪುತ್ತಾರೆಯೇ? ದಲಿತ, ಹಿಂದುಳಿದ ಸಂಘಟನೆಗಳು ದುಣ್ಣೆ ಹಿಡಿದರೆ ಹಿಂಸೆಗೆ ಪ್ರಚೋದನೆ ಎಂದು ಗೂಗಾಡುತ್ತಾರೆ. ಅವರು ಮಾತ್ರ ದೊಣ್ಣೆ ಹಿಡಿದು ಪಥಸಂಚಲನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಶಾಲೆಗಳಲ್ಲಿ ಆರ್‍ಎಸ್‍ಎಸ್‍ನವರಿಂದ ಬ್ರೈನ್ ವಾಷಿಂಗ್ ನಿಲ್ಲಬೇಕು. ಸರ್ದಾರ್ ಪಟೇಲ್ ಆರ್‍ಎಸ್‍ಎಸ್ ನಿಷೇಧ ಮಾಡಿದ್ದರು. ಇತಿಹಾಸದ ಪುಟವನ್ನ ತಿರುಗಿಸಿ ಆರ್‍ಎಸ್‍ಎಸ್ ಓದಲಿ, ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ದರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ನಿಷೇಧ ವಾಪಸ್ ಆಗಿದೆ ಎಂದರು.
ನಿಮ ಮನೆಯಲ್ಲಿ ಧರ್ಮ ಆಚರಣೆ ಮಾಡಿ ಯಾರು ಬೇಡ ಎನ್ನುವುದಿಲ್ಲ, ಬಡವರ ಮಕ್ಕಳ ಬದುಕನ್ನು ಹಾಳುಮಾಡಬೇಡಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಕ್ಕಳು ಗಣವೇಶ ಹಾಕಲಿ, ಅವರ ಮಕ್ಕಳಿಗೆ ಒಂದು ನಿಯಮ, ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ? ಎಂದು ಪ್ರಶ್ನಿಸಿದರು.
ಜೋಶಿ, ಅಶೋಕ, ಠಾಕೂರ್ ಅವರ ಮಕ್ಕಳಿಗೆ ಗಣವೇಶ ಹಾಕಿಸಲಿ, ದೆಹಲಿಯ ಸಂಪುಟ ಸಚಿವರ ಮಕ್ಕಳು ಏನು ಮಾಡುತ್ತಿದ್ದಾರೆ? ಇವರ ಮಕ್ಕಳೆಲ್ಲ ಏಕೆ ಗಣವೇಶ ಹಾಕುವುದಿಲ್ಲ. ಇವರ ಮಕ್ಕಳಿಗೆಲ್ಲ ಏಕೆ ಗೋಮೂತ್ರ ಕುಡಿಸುವುದಿಲ್ಲ. ಇವರ ಮಕ್ಕಳು ಏಕೆ ಗಂಗೆಯಲ್ಲಿ ಮುಳಗೇಳುವುದಿಲ್ಲ. ಇವರ ಮಕ್ಕಳು ಏಕೆ ಗೋ ರಕ್ಷಣೆಗೆ ಹೋಗಲ್ಲ ಎಂಬುದಕ್ಕೆ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.





