Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಅರಣ್ಯ ಒತ್ತುವರಿ ತಡೆಯಲು ಅರಣ್ಯ ಸಿಬ್ಬಂದಿಗೆ ಸಚಿವ ಈಶ್ವರ ಖಂಡ್ರೆ ಕರೆ

ಬೆಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳ ಕಷ್ಟಸಾಧ್ಯವಾಗಿದ್ದು, ಇರುವ ಅರಣ್ಯ ಒತ್ತುವರಿಯಾಗದಂತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಈ ಕರ್ತವ್ಯವನ್ನು ಅರಣ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮ ಆಗುತ್ತಿದ್ದು, ಪ್ರಕೃತಿ ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು ಎಂದರು.

ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳಿಂದ ಕೂಡಿದ ಪಶ್ಚಿಮಘಟ್ಟ ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಾಕವಾಗಿ ಹಬ್ಬಿದ್ದು, ಜೀವವೈವಿಧ್ಯತೆಯ ಅದ್ಭುತ ತಾಣವಾಗಿದೆ. ಇಷ್ಟು ಸಮೃದ್ಧ ಕಾನನ ಹೊಂದಿರುವ ನಾವು ಅದೃಷ್ಟವಂತರು ಎಂದರು.

ಇದನ್ನು ಓದಿ : ಮಾನವರ ಅಳಿವು ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತ: ಸಿಎಂ ಸಿದ್ದರಾಮಯ್ಯ

ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಪರಿಣಾಮವಾಗಿ ದೇಶದಲ್ಲಿ ಅರಣ್ಯ ಸಂಪತ್ತು ಉಳಿದಿದೆ ಎಂದರೆ ತಪ್ಪಾಗಲಾರದು ಎಂದ ಅವರು, ರಾಜ್ಯ ಈ ಎರಡೂ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿರುವುದರ ಫಲವಾಗಿ ಹುಲಿಗಳ ಸಂಖ್ಯೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದ್ದರೆ, ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಕಳೆದ ಜೂನ್ ತಿಂಗಳಲ್ಲಿ 5 ಹುಲಿಗಳ ಹತ್ಯೆ ಆಗಿತ್ತು. ಇತ್ತೀಚೆಗೆ ಮತ್ತೊಂದು ಹುಲಿ ಸಾವಿಗೀಡಾಗಿದೆ. ಇದು ಹಸುವನ್ನು ಕೊಂದ ವನ್ಯಜೀವಿ ವಿರುದ್ಧದ ಪ್ರತೀಕಾರದ ಕ್ರಮವಾಗಿದ್ದು, ಇದು ಅತ್ಯಂತ ನೋವಿನ ಸಂಗತಿ. ಈ ನಿಟ್ಟಿನಲ್ಲಿ ಅರಣ್ಯದೊಳಗಿನ ಹಾಗೂ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸಲು ಜನಸಂಪರ್ಕ ಸಭೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದರು.

ಅತ್ಯಂತ ಅಪಾಯಕಾರಿಯಾದ ಆನೆ ಸೆರೆ ಕಾರ್ಯಾಚರಣೆ, ಹುಲಿ ಸೆರೆ ಕಾರ್ಯಾಚರಣೆ, ವನ್ಯಜೀವಿ ಸಂರಕ್ಷಣೆ, ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆ ಮಾಡುವುದರ ಜೊತೆಗೆ ವಿಶಿಷ್ಟ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪದಕ ನೀಡಿ ಪುರಸ್ಕರಿಸುವುದರಿಂದ ಬೇರೆಯವರಿಗೂ ಸ್ಫೂರ್ತಿ ಲಭಿಸುತ್ತದೆ ಎಂದ ಅವರು, ಇಂದು ಪದಕ ಸ್ವೀಕರಿಸಿದ ಎಲ್ಲ 25 ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ತಾವು ಅರಣ್ಯ ಸಚಿವರಾದ ಬಳಿಕ 3 ವರ್ಷದಿಂದ ಬಾಕಿ ಇದ್ದ ಪದಕಗಳನ್ನು ಒಂದೇ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು. ನಂತರ ಕಳೆದ ವರ್ಷದಿಂದ ಆಯಾ ವರ್ಷದ ಪದಕವನ್ನು ಆಯಾ ವರ್ಷವೇ ಪ್ರದಾನ ಮಾಡಲಾಗುತ್ತಿದೆ ಎಂದರು.

ತಾವು ಸಚಿವರಾದ ಬಳಿಕ ಹೊಸದಾಗಿ 15 ಸಾವಿರ ಎಕರೆ ಪ್ರದೇಶವನ್ನು ಹೊಸದಾಗಿ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 250 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ಪೀಳಿಗೆಗೆ ಹಸಿರುಹೊದಿಕೆ ಉಳಿಸುವ ಸಲುವಾಗಿ ಮತ್ತು ಶ್ವಾಸತಾಣಗಳನ್ನು ಸಂರಕ್ಷಿಸುವ ಸಲುವಾಗಿ ಬೆಂಗಳೂರು ಹೆಸರುಘಟ್ಟ ಕೆರೆ ಬಳಿಯ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ. ಜೊತೆಗೆ ಮಾತಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲಾಗುತ್ತಿದೆ ಎಂದರು.

ಇದನ್ನು ಓದಿ : ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 1 ಮೆಗಾವ್ಯಾಟ್ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗುತ್ತಿದ್ದು, ಉದ್ಯಾನದ ಇಂದಿನ ಮತ್ತು ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ ನಿಂದಲೇ ಪೂರೈಸಲು ತೀರ್ಮಾನಿಸಲಾಗಿದೆ. ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 540 ಗಸ್ತು ವನಪಾಲಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಈ ಪೈಕಿ ಆಯ್ಕೆಯಾಗಿರುವ 514 ಗಸ್ತು ವನಪಾಲಕರ ಆಯ್ಕೆ ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಅನಿಲ್ ಕುಂಬ್ಳೆ ಮಾತನಾಡಿ, ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ರಾಷ್ಟ್ರಪತಿ ಸೇವಾ ಪದಕ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಅನಿಲ್ ಕುಂಬ್ಳೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕವಾಗಿರುವ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಅರಣ್ಯಪಡೆ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಲಾಯಿತು. ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Tags:
error: Content is protected !!