ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಕರ್ನಾಟಕ ಮೈಕ್ರೋ ಫೈನಾನ್ಸ್ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಫೈನಾನ್ಸ್ ಕಾಟಕ್ಕೆ ಹೆದರಿ ಬಡ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ತಡೆಗೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಸುಗ್ರೀವಾಜ್ಞೆಗೆ ಸಿಎಂ ಸಿದ್ದು ಒಪ್ಪಿಗೆ ನೀಡಿದ್ದಾರೆ.
ಈ ಸುಗ್ರೀವಾಜ್ಞೆ ಪ್ರಕಾರ ತಪ್ಪಿತಸ್ಥರಿಗೆ 10 ವರ್ಷಗಳ ಕಾಲ ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೇ 5 ಲಕ್ಷದವರೆಗೆ ದಂಡ ವಿಧಿಸಲು ಪ್ರಸ್ತಾಪವಿದೆ. ಇನ್ನು ಅನಧಿಕೃತವಾಗಿ ಸಾಲ ನೀಡಿದ್ದರೇ ಅದನ್ನು ಮನ್ನಾ ಮಾಡಲಾಗುವುದು. ನೋಂದಣಿ ರಹಿತ ಮೈಕ್ರೋ ಫೈನಾನ್ಸ್‌ಗಳ ಅಸಲು, ಬಡ್ಡಿ ಕೂಡ ಮನ್ನಾ ಆಗಲಿದೆ. ಖಾಸಗಿ ಬಡ್ಡಿದಾರರಿಗೂ ಕಡಿವಾಣ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಲೇವಾದೇವಿದಾರರು ನೋಂದಣಿ ಮಾಡದೇ ಸಾಲ ವಹಿವಾಡು ಮಾಡುವಂತಿಲ್ಲ. ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ನೋಂದಣಿ ಕಡ್ಡಾಯ. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಅಡಮಾನ ಇಟ್ಟುಕೊಂಡಿದ್ದರೆ ತಪ್ಪದೇ ಹಿಂತಿರುಗಿಸಬೇಕು. ನೋಂದಣಿ ಮಾಡಿಕೊಳ್ಳದ ಲೇವಾದೇವಿದಾರರಿಗೆ ಸಾಲ ಮರುಪಾವತಿಸುವಂತಿಲ್ಲ. ಅಸಲು, ಬಡ್ಡಿ ಎರಡೂ ಮನ್ನಾ ಆಗಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ಬರೆಯಲಾಗಿದೆ.