ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಮರ್ಯಾದೆಗೇಡು ಹತ್ಯೆ ನಡೆದ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರ ಜತೆ ಅವರು ಮಾತನಾಡಿದರು. ಉಗ್ರ ಕಾನೂನು ತರಲು ಸಿಎಂ ಜೊತೆ ಚರ್ಚೆ ರಾಜ್ಯದಲ್ಲಿ ಇಂತಹ ಮರ್ಯಾದೆಗೇಡು ಹತ್ಯೆ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು. ಈ ಬಗ್ಗೆ ಉಗ್ರವಾದ ಕಾನೂನು ತರಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಏಳು ತಿಂಗಳ ಗರ್ಭಿಣಿಯನ್ನು ಅವರ ಕುಟುಂಬಸ್ಥರೇ ಕೊಲೆ ಮಾಡಿರುವುದು ಅಮಾನವೀಯವಾದದು, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಇದಾಗಿದೆ. ಸರಕಾರ ಇದನ್ನು ಸಹಿಸುವುದಿಲ್ಲ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿದವರು, ಅದಕ್ಕೆ ಉತ್ತೇಜನ ಕೊಟ್ಟವರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.




