Mysore
25
overcast clouds
Light
Dark

ದಲಿತ ನಾಯಕ ವಿ.ಶ್ರೀನಿವಾಸ್‌ಪ್ರಸಾದ್‌ ನಿಧನಕ್ಕೆ ಖರ್ಗೆ ಸೇರಿದಂತೆ ವಿವಿಧ ನಾಯಕರ ಕಂಬನಿ

ಮೈಸೂರು: ನೇರ ನಡೆ-ನುಡಿಯ ದಿಟ್ಟತನದ ವ್ಯಕ್ತಿ, ಸ್ವಾಭಿಮಾನಿ ವಿ.ಶ್ರೀನಿವಾಸ್‌ಪ್ರಸಾದ್‌ ಅವರ ನಿಧನಕ್ಕೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ನಾಯಕರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಸಂತಾಪ ಸೂಚಿಸಿರುವ ಖರ್ಗೆ ಅವರು, ಸ್ನೇಹಿತ, ಸಂಸದರು, ಕರ್ನಾಟಕ ಕಂಡಂತಹ ಶ್ರೇಷ್ಠ ಮುತ್ಸದ್ದಿ ನಾಯಕರಲ್ಲಿ ಒಬ್ಬರಾದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯು ಅಪಾರ ನೋವನ್ನುಂಟುಮಾಡಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡು ಶೋಷಿತರ ಏಳಿಗೆಗಾಗಿ ಹಾಗೂ ಅನ್ಯಾಯ, ಅಸಮಾನತೆಯ ವಿರುದ್ಧದ ಹೋರಾಟಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದ ಶ್ರೀನಿವಾಸ್ ಪ್ರಸಾದ್ ಅವರು ಆದರ್ಶವಾಗಿ ಇದ್ದಂತಹ ನಾಯಕರು ಎಂದು ಸ್ಮರಿಸಿದ್ದಾರೆ.

ನೇರ, ನಿಷ್ಠುರ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ಬಾಬಾ ಸಾಹೇಬರ ಸಮಸಮಾಜದ ನಿರ್ಮಾಣದ ಬಗೆಗಿನ ಅವರ ಬದ್ಧತೆ ಹಾಗೂ ಹೋರಾಟ ಸದಾ ಸ್ಪೂರ್ತಿದಾಯಕ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತೀವ್ರ ಸಂತಾಪ ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಹಿರಿಯ ನಾಯಕರು, ಸಂಸದರಾದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ಆಪ್ತರೂ ಆಗಿದ್ದ ಪ್ರಸಾದ್ ಅವರೊಂದಿಗೆ ಕೆಲಸ ಮಾಡಿದ ದಿನಗಳು ಇನ್ನೂ ನೆನಪಿನಲ್ಲಿವೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರು, ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ ಖಾತೆಯಲ್ಲಿ ಸಂತಾಪ ತಿಳಿಸಿದ್ದಾರೆ.

ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನ ನನಗೆ ನೋವುಂಟು ಮಾಡಿದೆ. ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ಅವರ ರಾಜಕೀಯ ಜೀವನ ಮಾದರಿಯ ಹಾದಿ. ಆರು ಅವಧಿಗೆ ಸಂಸದರಾಗಿ, ಎರಡು ಅವಧಿಗೆ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಪ್ರಸಾದ್ ಅವರು, 27 ವರ್ಷಗಳ ಸುದೀರ್ಘ ಸಂಸತ್ ಸದಸ್ಯರಾಗಿ 7 ಪ್ರಧಾನಿಗಳನ್ನು ಕಂಡಿದ್ದರು. ಅವರು ಅಪರೂಪದಲ್ಲಿ ಅಪರೂಪದ ಜನನಾಯಕರಾಗಿದ್ದರು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸಂತಾಪ ತಿಳಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಸಂತಾಪ ಸೂಚಿಸಿದ್ದು, ವಿ ಶ್ರೀನಿವಾಸ್ ಪ್ರಸಾದ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಿಲಿ ಎಂದಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಕಂಬನಿ ಮಿಡಿದಿದ್ದು, ಸಮಸಮಾಜದ ಗಟ್ಟಿ ಪ್ರತಿಪಾದಕರು, ರಾಜ್ಯ ಕಂಡ ಮೇರು ನಾಯಕರಲ್ಲಿ ಒಬ್ಬರಾದ ಶ್ರೀ ಶ್ರೀನಿವಾಸ ಪ್ರಸಾದ್ ಅವರ ಅಕಾಲಿಕ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ರಾಜ್ಯದಲ್ಲಿ ಪ್ರಗತಿಪರ ರಾಜಕಾರಣದ ಕೊಂಡಿ ಕಳಚಿದಂತಾಗಿದೆ. ಬುದ್ದ ಬಸವ ಅಂಬೇಡ್ಕರ್ ತತ್ವಗಳ ಆಧಾರದಲ್ಲಿ ಅನ್ಯಾಯದ ವಿರುದ್ಧದ ಹೋರಾಟದ ಹಾದಿಯನ್ನೇ ಬದುಕಾಗಿಸಿದ್ದ, ವಯಕ್ತಿಕವಾಗಿ ಮಾರ್ಗದರ್ಶಕರಾಗಿದ್ದ ಅವರ ಜೀವನ ನಾಡಿನ ಮುಂದಿನ ಪೀಳಿಗೆಗೆ ಸದಾ ನಂದಾದೀಪದಂತೆ ಉಳಿಯಲಿದೆ ಎಂದು ಸಂತಾಪ ಸೂಷಿಸಿದ್ದಾರೆ.