ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳ ಬದಲು 100 ಅಂಕಗಳಿಗೆ ಇಳಿಸುವ ನಿರ್ಧಾರ ತೆಗೆದುಕೊಂಡಿರುವುದನ್ನು ಖಂಡಿಸಿರುವ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು, ತಕ್ಷಣ ಈ ನಿರ್ಧಾರವನ್ನು ವಾಪಸ್ಸು ಪಡೆದು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಪರ ಹೋರಾಟಕ್ಕೊಂದು ಸಂವೇದನಾ ಪರಂಪರೆ ಮತ್ತು ಇತಿಹಾಸವಿದೆ. ಈ ಇತಿಹಾಸದ ಅರಿವಿರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂತಹ ಕನ್ನಡ ವಿರೋಧಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದು ಕನ್ನಡದ ಕಣ್ಮಣಿ, ವರನಟ ಡಾ. ರಾಜಕುಮಾರ್ ನೇತೃತ್ವದಲ್ಲಿ ಹಾಗೂ ಅನೇಕ ಕನ್ನಡದ ಕಟ್ಟಾಳುಗಳ ಆಸರೆಯಲ್ಲಿ ನಡೆದ ಐತಿಹಾಸಿಕ ಗೋಕಾಕ್ ಚಳವಳಿಯ ಕನ್ನಡ ಪರ ಆಂದೋಲನದ ಪ್ರತಿಫಲವಾಗಿ ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇಂತಹ ಹೋರಾಟದ ಹಿನ್ನೆಲೆಯಲ್ಲಿ ಜಾರಿಗೆ ಬಂದ ಕನ್ನಡದ 125 ಅಂಕಗಳನ್ನು ಇತಿಹಾಸದ ಪ್ರಜ್ಞೆಯಿಲ್ಲದೆ 100 ಅಂಕಗಳಿಗೆ ಇಳಿಸುವ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





