ಬೆಂಗಳೂರು : ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ಜಾರಿ ವಿರೋಧಿಸಿ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದಿಂದ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ.
ಸುಮಾರು ಎರಡು ಲಕ್ಷ ಲಾರಿಗಳು ಸಂಚಾರ ಸ್ಥಗಿತಗೊಳಿಸಲಿವೆ ಎಂದು ಹೇಳಲಾಗಿದೆ.
ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘ ಈ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮುಷ್ಕರ ಯಶಸ್ವಿಯಾಗುವ ಬಗ್ಗೆ ಅನುಮಾನ ಮೂಡಿಸಿದೆ.
ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಲಾರಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂ. ದಂಡ ವಿಧಿಸುವ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನು ವಿರೋಧಿಸಿ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರ ನಡೆಸಿದ್ದರಿಂದ ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೊಳಿಸುವುದರಿಂದ ಹಿಂದೆ ಸರಿದಿತ್ತು.
ಲಾರಿ ಮಾಲೀಕರ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಲಾಗಿತ್ತು. ಬಳಿಕ ಮುಷ್ಕರ ಹಿಂಪಡೆಯಲಾಗಿತ್ತು.
ಈಗ ಹೊಸ ನಿಯಮ ಜಾರಿಯಿಂದ ಸಂಪೂರ್ಣವಾಗಿ ಹಿಂದೆ ಸರಿದಿರುವುದಾಗಿ ಘೋಷಿಸುವಂತೆ ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ.