ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ 3,000ರಿಂದ 4,000 ಕೋಟಿ ರೂ. ಲೂಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಮುಡಾದಲ್ಲಿ 3,000ರಿಂದ 4,000 ಕೋಟಿ ರೂ. ಲೂಟಿಯಾಗಿದೆ. ಸಿಎಂ ಅವರ ಕುಟುಂಬ ಅಕ್ರಮವಾಗಿ 14 ಸೈಟ್‍ಗಳನ್ನು ಪಡೆದಿತ್ತು. ಈಗ ಮುಡಾ ಮಾಜಿ ಆಯುಕ್ತ ದಿನೇಶ್‍ಕುಮಾರ್ ಬಂಧನವಾಗಿದೆ. ಇನ್ನಷ್ಟು ಬ್ರೋಕರ್‌ಗಳ ತನಿಖೆಯೂ ಆಗಬೇಕಿದೆ ಎಂದರು.
ವಿಜಯಪುರದಲ್ಲಿ ಬ್ಯಾಂಕ್ ಲೂಟಿ ವಿಚಾರದ ಬಗ್ಗೆ ಮಾತನಾಡಿದ ಅಶೋಕ್, ಮತ್ತೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ನಡೆಯುತ್ತಿವೆ. ಈ ಸರ್ಕಾರದಲ್ಲಿ ದರೋಡೆಕೋರರಿಗೆ ಹಬ್ಬದ ವಾತಾವರಣ ಇದ್ದಂತೆ. ಜೊತೆಗೆ ಕಾಂಗ್ರೆಸ್‍ನವರು ನೀವು ಲೂಟಿ ಮಾಡಿ, ನಮಗೆ ಕಮಿಷನ್ ಕೊಡಿ ಅಂತಾರೆ. ಆಡಳಿತ ಹದಗೆಟ್ಟು ಹೋಗಿದೆ, ದುಡ್ಡಿಲ್ಲದೇ ಸರ್ಕಾರ ಪಾಪರ್ ಆಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.





