ಶಿವಮೊಗ್ಗ: ಲೋಕಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮಂಡ್ಯ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ರೂಪುಗೊಳ್ಳುತ್ತಿದೆ. ಕಾಂಗ್ರೆಸ್ ಪರ ಸ್ಟಾರ್ ಚಂದ್ರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮೈತ್ರಿ ಅಭ್ಯರ್ಥಿಯಾಗಿ ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಗಳು ಜೋರಾಗಿದ್ದು, ನಟ ದರ್ಶನ್ ಇಂದು ( ಏಪ್ರಿಲ್ 28 ) ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಮೈತ್ರಿ ಅಭ್ಯರ್ಥಿ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದು, ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಪ್ರಜಾಪ್ರಭುತ್ವದಲ್ಲಿ ಯಾರು ಯಾರ ಪರ ಬೇಕಾದರೂ ಪ್ರಚಾರ ಮಾಡಬಹುದು. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವಂತದ್ದು ಏನೂ ಇಲ್ಲ ಎಂದು ತಿಳಿಸಿದರು.
ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ನಟ ದರ್ಶನ್ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಪ್ರತಿಸ್ಪರ್ಧಿ, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರವನ್ನು ಮಾಡಿದ್ದರು.





