ಕೊಪ್ಪಳ: ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಸರ್ಕಾರ ಅವಧಿಯಲ್ಲಿ 40 ಸಾವಿರ ಕೋಟಿ ರೂ. ಕೊವಿಡ್ ಹಗರಣ ನಡೆದಿದೆ ಎಂದು ಆರೋಪ ಮಾಡಿರುವ ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಕ್ರಮ ಸಂಬಂಧ ದಾಖಲೆಗಳನ್ನು ತನಿಖಾ ಆಯೋಗಕ್ಕೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ಕಾಲಾವಧಿಯಲ್ಲಿ ನಡೆದ ಹಗರಣಗಳ ಕುರಿತು ತನಿಖೆ ನಡೆಸಲು ಆಯೋಗ ರಚಿಸಿದ್ದೇವೆ. ಭ್ರಷ್ಟಾಚಾರ ಆರೋಪ ಮಾಡಿರುವ ಯತ್ನಾಳ್ ಅವರು ದಾಖಲೆಗಳನ್ನು ಆಯೋಗಕ್ಕೆ ಒದಗಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಇನ್ನೂ ಬಸವರಾಜ ರಾಯರೆಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಕುರಿತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಯರೆಡ್ಡಿ ಆರ್ಥಿಕ ತಜ್ಞರೇ, ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ರಾಯರೆಡ್ಡಿ ಸಾಕಷ್ಟು ಆರ್ಥಿಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ಅದರ ಬಗ್ಗೆ ಯಾರು ಕೇಳುವುದಿಲ್ಲ ಎಂದರು.





