Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ನವೆಂಬರ್.‌19ರಂದು ಅಕ್ಕಪಡೆಗೆ ಚಾಲನೆ: ಪರಮೇಶ್ವರ್‌ ಭೇಟಿಯಾದ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಬಾಲ್ಯವಿವಾಹ ತಡೆಗಟ್ಟುವ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ರಚಿಸಲಾಗಿರುವ ಅಕ್ಕ ಪಡೆಗೆ ಇದೇ.19 ರಂದು ಚಾಲನೆ ನೀಡಲಾಗುತ್ತಿದ್ದು, ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸದಾಶಿವನಗರದಲ್ಲಿರುವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಕ್ಕ ಕಾರ್ಯಪಡೆಯ ಬಗ್ಗೆ ಚರ್ಚೆಗಳಾಗಿವೆ.

ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯ ಪಡೆಗಳನ್ನು ರಚಿಸಲಾಗುತ್ತಿದ್ದು, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಿರುಕುಳವನ್ನು ಹತ್ತಿಕ್ಕುವ ಗುರಿ ಹೊಂದಿದೆ.

ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ತುತ್ತಾದ ಸಂದರ್ಭದಲ್ಲಿ ತತ್‍ಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಈ ಪಡೆಗಳನ್ನು ರೂಪಿಸಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಎನ್.ಸಿ.ಸಿ.ಯ ಕೆಡೆಟ್‍ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಾರ್ಯ ಪಡೆಯಲ್ಲಿರಲ್ಲಿದ್ದಾರೆ.

ಪೊಲೀಸ್ ಇಲಾಖೆಯ ಮಾದರಿಯಲ್ಲಿ ಪ್ರತ್ಯೇಕ ಗಸ್ತು ವಾಹನಗಳನ್ನು ಈ ಪಡೆಗಾಗಿ ನಿಯೋಜಿಸಲಾಗಿದೆ. ಬಸ್ ನಿಲ್ದಾಣ, ಶಾಲಾ ಕಾಲೇಜು, ಮಾರುಕಟ್ಟೆ ಹಾಗೂ ಇತರ ಜನ ಸಂದಣಿ ಪ್ರದೇಶಗಳಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಲಾಗುತ್ತದೆ.

ಬಾಲ್ಯ ವಿವಾಹ ತಡೆ ಹಾಗೂ ಫೋಕ್ಸೊ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾಯ್ದೆಯ ಈ ಪಡೆಯ ಮೂಲ ಉದ್ದೇಶವಾಗಿದೆ.

ಇತ್ತೀಚೆಗೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಣಯ ಕೈಗೊಂಡಿದ್ದರು. ಅದರಂತೆ ನವೆಂಬರ್ 19 ರಂದು ಅಕ್ಕ ಕಾರ್ಯಪಡೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪೂರ್ವ ಭಾವಿಯಾಗಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲು ಮತ್ತು ಕಾರ್ಯಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಸಚಿವದ್ವಯರು ಇಂದು ಚರ್ಚೆ ನಡೆಸಿದ್ದಾರೆ.

Tags:
error: Content is protected !!