Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಎಸ್‌ಟಿಗೆ ಕುರುಬ ಸಮುದಾಯ : ಸರ್ಕಾರಕ್ಕೆ ವರದಿ ಸಲ್ಲಿಸಿದ ಬುಡಕಟ್ಟು ಸಂಶೋಧನಾ ಸಂಸ್ಥೆ

ಬೆಂಗಳೂರು : ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರ್ಪಡೆ ಮಾಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸರ್ಕಾರಕ್ಕೆ ವರದಿ ನೀಡಿದೆ.

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೆ ಮಾಡುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ನೀಡಬೇಕೆಂದು ಸರ್ಕಾರ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸೂಚನೆ ನೀಡಿತು.

ಇದರನ್ವಯ ರಾಜ್ಯಾದ್ಯಂತ ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ, ಮೌಲ್ಯಮಾಪನ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿರುವ ಸಂಸ್ಥೆ ಸರ್ಕಾರಕ್ಕೆ ಮುಚ್ಚಿದ ಲಕೋಟಿಯಲ್ಲಿ ವರದಿಯನ್ನು ಸಲ್ಲಿಸಿದೆ.

ವರದಿಯ ಪ್ರಕಾರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಲು ಯಾವುದೇ ಅಡ್ಡಿ ಇಲ್ಲ .ಇದರಿಂದ ಆ ಸಮುದಾಯದ ಮೀಸಲಾತಿಗೆ ಯಾವುದೇ ಕಾನೂನಿನ ತೊಡಕಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:-ಮಂಡ್ಯ | ಜಮೀನುಗಳಿಗೆ ನುಗ್ಗಿದ ನೀರು: ಬೆಳೆ ನಷ್ಟದ ಆತಂಕದಲ್ಲಿ ರೈತರು

ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ಶೇ.೭ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಒಂದು ವೇಳೆ ಈ ಪಟ್ಟಿ ವ್ಯಾಪ್ತಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡಿದರೆ ಮೀಸಲಾತಿ ಪ್ರಮಾಣವನ್ನು ಶೇ.೭ರಿಂದ ೯ಕ್ಕೆ ಹೆಚ್ಚಿಸಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವಂತೆಯೂ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಯಾವುದೇ ಸಮುದಾಯವನ್ನು ಇನ್ನೊಂದು ಸಮುದಾಯದ ಜಾತಿಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಈ ಹಿಂದೆ ಮೈಸೂರು, ಚಾಮರಾಜನಗರ ಮತ್ತಿತರ ಕಡೆ ವಾಸವಾಗಿರುವ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಕೇಂದ್ರ ಸರ್ಕಾರ ಸೇರ್ಪಡೆ ಮಾಡಿತ್ತು.

ಈಗ ಅದರನ್ವಯ ರಾಜ್ಯ ಸರ್ಕಾರವು ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕ್ರಮ ತೆಗೆದುಕೊಳ್ಳಬಹುದೆಂದು ವರದಿ ಹೇಳಿದೆ.

Tags:
error: Content is protected !!