ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು, ಇಂದು ಸಂಜೆಯ ವೇಳೆಗೆ ನಾಲ್ವರ ಮೃತದೇಹ ಹುಟ್ಟೂರಿಗೆ ಬರಲಿದೆ.
ಪ್ರಯಾಗ್‌ರಾಜ್‌ನಿಂದ ಬುಧವಾರ ರಾತ್ರಿಯೇ ಆಂಬುಲೆನ್ಸ್ ಮೂಲಕ ಶವಗಳು ಹೊರಡಿದ್ದು, ಇಂದು ಬೆಳಿಗ್ಗೆ ದೆಹಲಿ ತಲುಪಿದೆ. ಮಧ್ಯಾಹ್ನ 3.30ಕ್ಕೆ ದೆಹಲಿಯಿಂದ ಹೊರಟ ವಿಮಾನ ಸಂಜೆ 5.30ಕ್ಕೆ ಬೆಳಗಾವಿಗೆ ಬರಲಿದೆ.
ಇನ್ನು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ಅವರು ಶವಗಳು ಸುಗಮವಾಗಿ ನಗರಕ್ಕೆ ಬರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಇನ್ನು ಪ್ರಯಾಗ್‌ರಾಜ್ ದುರಂತದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಧಿಕಾರಿಗಳ ತಂಡವನ್ನು ಕುಂಭಮೇಳಕ್ಕೆ ಕಳುಹಿಸಿ ಸಹಾಯವಾಣಿ ಶುರುಮಾಡಿದೆ. 080-22340676ಕ್ಕೆ ಕರೆ ಮಾಡಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.