ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರ್ನಾಟಕ ಸರ್ಕಾರದ ಬಗ್ಗೆ ಹೇಳಿಕೆ ನೀಡುವ ಬದಲು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿರೋ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಲಿ ಎಂದು ಸಚಿವ ಕೃಷ್ಣ ಬೈರೇಗೌಡ ತೀರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.6) ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿಯ ಕೇಂದ್ರ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್‌ನಲ್ಲಿ ಹೇಳಿಕೆ ನೀಡಬೇಕೇ ಹೊರತು, ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಬಾರದು. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಹೆಜ್ಜೆ ಹೆಜ್ಜೆಗೂ ಅನ್ಯಾಯವಾಗುತ್ತಿದೆ. ಈ ಬಾರಿಯ ಬಜೆಟ್ ಕರ್ನಾಟಕಕ್ಕೆ ಕರಾಳ ಅಧ್ಯಾಯ ಆಗಿದೆ. ರಾಜ್ಯದ ಜನತೆ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ತೆರಿಗೆ ಕಟ್ಟುವ ಜನರ ಹಣವನ್ನು ಲೂಟಿ ಮಾಡುತ್ತಿದೆ. ಹೀಗಾಗಿ ದೇವೇಗೌಡರಿಗೆ ನಮ್ಮ ರಾಜ್ಯದ ಬಗ್ಗೆ ಇವರಿಗೆ ಬದ್ಧತೆ ಇದ್ದರೆ ಕರ್ನಾಟಕಕ್ಕೆ ಮೊದಲು ಕೇಂದ್ರದಿಂದ ನ್ಯಾಯ ಕೊಡಿಸಲಿ. ಅದನ್ನ ಬಿಟ್ಟು ಅವರು ಮಾಡೋ ಅನ್ಯಾಯವನ್ನು ಮುಚ್ಚಿಹಾಕಿ ಇವರು ಕೂಡಾ ಅನ್ಯಾಯದಲ್ಲಿ ಪಾಲಾಗೋದು ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಇನ್ನೂ ಅನುಮತಿಯನ್ನೇ ನೀಡಿಲ್ಲ. ಆದರೆ ಸುಪ್ರೀಂಕೋರ್ಟ್ ಮೇಕೆದಾಟಿಗೆ ವಿರೋಧ ಇಲ್ಲ ಎಂದು ಹೇಳಿದೆ. ಹೀಗಾಗಿ ದೇವೇಗೌಡರೇ ಆಗಲಿ ಯಾರೇ ಆಗಲಿ ಮೊದಲು ಅನುಮತಿ ಕೊಡಿಸಿ. ಚನ್ನಪಟ್ಟಣ ಎಲೆಕ್ಷನ್‌ನಲ್ಲಿ ಕೈಹಿಡಿದು ಸಹಿ ಹಾಕಿಸುತ್ತೇವೆ ಎಂದು ಭಾಷಣ ಮಾಡಿದ್ದರು, ಅದನ್ನು ಮೊದಲು ಕೊಡಿಸಲಿ ಎಂದು ಕಿಡಿಕಾರಿದರು.