ದೆಹಲಿ: ಕಾವೇರಿ ನದಿಯಿಂದ ನಿಗದಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ. ಮುಂದಿನ ತಿಂಗಳು ರಾಜ್ಯ ಹರಿಸಬೇಕಾದ ನೀರಿಗೆ ಜಮೆ ಮಾಡಿಕೊಳ್ಳಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.
ಈವರೆಗೆ ಕರ್ನಾಟಕದಿಂದ ತಮಿಳುನಾಡು ರಾಜ್ಯಕ್ಕೆ 71.56 ಟಿಎಂಸಿ ನೀರು ಹರಿಸಬೇಕಿತ್ತು. ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ ಜಲಾಶಯಗಳು ಕೆಲವೇ ದಿನಗಳಲ್ಲಿ ಭರ್ತಿಯಾದವು. ಈ ಹಿನ್ನೆಲೆಯಲ್ಲಿ 170 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಹೆಚ್ಚುವರಿಯಾಗಿ 100 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕ ವಾದ ಮಂಡಿಸಿತು.
ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಎರಡೂ ರಾಜ್ಯಗಳಿಗೂ ಸಲಹೆ ನೀಡಿದೆ. ಎರಡೂ ರಾಜ್ಯಗಳು ಕಾವೇರಿ ನದಿ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಿ. ಜಲಾಶಯಗಳಲ್ಲಿ ಆದಷ್ಟು ಹೆಚ್ಚಿನ ಮಟ್ಟಿಗೆ ನೀರನ್ನು ಸಂಗ್ರಹಿಸಿಕೊಟ್ಟುಕೊಳ್ಳಿ. ಜಲಾಶಯಗಳು ತುಂಬಿವೆ ಎಂದು ನೀರನ್ನು ಪೋಲು ಮಾಡಬೇಡಿ. ಈ ಬಗ್ಗೆ ಜಲಾಶಯದ ಅಧಿಕಾರಿಗಳಿಗೆ ತಿಳಿಸಿ ಎಂದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.