ಕೆ.ಆರ್.ನಗರ : ಹಣದಾಸಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವೃದ್ದೆ ತಿಪ್ಪೂರು ಗ್ರಾಮದ ಲೇಟ್ ಮೂಡ್ಲಶೆಟ್ಟಿ ಅವರ ಪತ್ನಿ ಗೌರಮ್ಮ (90) ಎಂಬುವರಾಗಿದ್ದಾರೆ. ತಿಪ್ಪೂರು ಗ್ರಾಮದ ವೀರಭದ್ರ ಎಂಬ ವ್ಯಕ್ತಿ ವೃದ್ಧೆಯ ಹಣಕ್ಕಾಗಿ ಕೊಲೆಗೈದು ಜೈಲು ಪಾಲಾಗಿದ್ದಾನೆ.
ಕೊಲೆಯಾದ ವೃದ್ಧೆಗೆ ಮೂವರು ಗಂಡು ಮಕ್ಕಳು ಹಾಗೂ ಒರ್ವ ಪುತ್ರಿ ಇದ್ದು,ಮೂವರು ಕೂಡ ಪ್ರತ್ಯೇಕವಾಗಿ ವಾಸವಾಗಿದ್ದರು ಎನ್ನಲಾಗಿದೆ.
ಘಟನೆ ವಿವರ ;
ವೃದ್ದೆ ಗೌರಮ್ಮಳಿಗೆ ವೀರಭದ್ರ ತೀರ ಪರಿಚಿತನಾಗಿದ್ದು ಬಹಳಷ್ಟು ವಿಶ್ವಾಸ ಗಳಿಸಿದ್ದ. ಆದ್ದರಿಂದ ಗೌರಮ್ಮ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಡ್ರಾ ಮಾಡುವುದು, ಇತರೆ ಕೆಲಸವನ್ನು ಮಾಡಿಕೊಡುತ್ತಿದ್ದು ಈಗ್ಗೆ ಹದಿನೈದು ದಿನಗಳ ಹಿಂದೆ ಗೌರಮ್ಮ ವೀರಭದ್ರನ ಜೊತೆ ಬ್ಯಾಂಕ್ ಹೋಗಿ 75 ಸಾವಿರ ಹಣ ಡ್ರಾ ಮಾಡಿದ್ದಾರೆ.
ಬಳಿಕ ತುರ್ತಾಗಿ ಹಣ ಬೇಕು ಕೊಡಿ ಎಂದು ಗೌರಮ್ಮ ಅವರ ಬಳಿ ಇದ್ದ 75 ಸಾವಿರ ಹಣ ಪಡೆದಿದ್ದಾನೆ. ವಾರ ಕಳೆದ ನಂತರ ಗೌರಮ್ಮ ಹಣ ಕೊಡು ಎಂದು ಕೇಳಿದಾಗ ಕೊಡುತ್ತೇನೆ ಎಂದು ಸಬೂಬು ಹೇಳಿ ರಾತ್ರಿ ವೇಳೆ ವೃದ್ಧೆ ಗೌರಮ್ಮ ಮನೆಗೆ ಹೋಗಿ ಕಪಾಳಕ್ಕೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಮನೆಯ ಹಿಂದೆ ಇರುವ ಶೌಚಾಲಯದ ಯುಜಿಡಿ ಗುಂಡಿಗೆ ಹಾಕಿ ಮುಚ್ಷಿದ್ದಾನೆ. ಈತ್ತ ಗೌರಮ್ಮ ಕಾಣದಿರುವ ಬಗ್ಗೆ ಮಕ್ಕಳು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆಯಲ್ಲಿ ವೀರಭದ್ರ ಕೂಡ ಗ್ರಾಮದಿಂದ ನಾಪತ್ತೆಯಾಗಿರುತ್ತಾನೆ. ಅನುಮಾನಗೊಂಡ ಗೌರಮ್ಮನ ಮಕ್ಕಳು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ತನಿಖೆ ಆರಂಭಿಸಿದ ಪೊಲೀಸರು ವೀರಭದ್ರ ಗ್ರಾಮಕ್ಕೆ ಬಂದ ನಂತರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣಕ್ಕಾಗಿ ಗೌರಮ್ಮ ಅವರನ್ನು ಕೊಲೆಗೈದು, ಶವವನ್ನು ಶೌಚಾಲಯದ ಯುಜಿಡಿ ಗುಂಡಿಗೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಬಳಿಕ ಪೊಲೀಸರು ಆರೋಪಿಯನ್ನು ತಿಪ್ಪೂರು ಗ್ರಾಮಕ್ಕೆ ಕರೆತಂದು ಶೌಚಾಲಯದ ಯುಜಿಡಿ ಗುಂಡಿಯೊಳಗೆ ಇದ್ದ ಗೌರಮ್ಮಳ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ಕೊಲೆ ಆರೋಪಿ ವೀರಭದ್ರನ್ನು ಪಟ್ಟಣದ ಪೊಲೀಸರು ಹೆಚ್ಷಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಎಎಸ್‌ಪಿ ಮಲ್ಲಿಕ್, ಡಿ ವೈ ಎಸ್ ಪಿ ಟಿ ಬಿ ರಾಜಣ್ಣ ತಿಪ್ಪೂರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.





