ಕಾಪು : ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ನವೆಂಬರ್ 30 ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೋತಲಕಟ್ಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ಉರುಳಿಬಿದ್ದಿದ್ದು, ಟೆಂಪೋನಲ್ಲಿದ್ದ 12 ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಈ ಪೈಕಿ ಐವರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ಬಂಗಾಳದ ಕಮಲ್, ಸಮರೇಶ್, ಅಸ್ಸಾಂನ ಪಪ್ಪು ರವಿ ದಾಸ್, ಹರೀಶ್,ತ್ರಿಪುರಾದ ಗಪುನಾತ್ ಮೃತ ಕಾರ್ಮಿಕರು.
ಘಟನೆ ನಡೆದದ್ದು ಹೇಗೆ?
ಟೆಂಪೋವು ಕಾಪು ಮಜೂರಿನಿಂದ ಮಲ್ಪೆಗೆ ಡೆಕರೋಷನ್ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಾಗಿಸುತ್ತಿತ್ತು. ವಾಹನದಲ್ಲಿ ಒಟ್ಟು 12 ಮಂದಿ ಕಾರ್ಮಿಕರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಭಾರವಾದ ಕಬ್ಬಿಣದ ಸಲಕರಣೆಗಳು ಕಾರ್ಮಿಕರ ಮೇಲೆ ಬಿದ್ದಿವೆ. ಈ ಪರಿಕರಗಳ ನಡುವೆ ಸಿಲುಕಿ ಉಸಿರುಗಟ್ಟಿ ಉತ್ತರ ಭಾರತದ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.





