ಬೆಂಗಳೂರು: ಸತ್ಯಕ್ಕಾಗಿ ಸಿಂಹಾಸನವನ್ನೇ ತೃಣದಂತೆ ಕಂಡಿದ್ದ ಸತ್ಯ ಹರಿಶ್ಚಂದ್ರ ಮಹಾರಾಜರಿಗೆ ಅಪಮಾನ ಮಾಡಬೇಡಿ. ಆ ಪುಣ್ಯ ಪುರುಷರ ಹೆಸರಿಗೆ ಮಸಿ ಬಳಿದು ಪಾಪ ಕಟ್ಟಿಕೊಳ್ಳಬೇಡಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸತ್ಯ ನಮ್ಮಪ್ಪನ ಮನೆ ಜಹಗೀರು ಎಂದು ಪೋಸು ಕೊಡುತ್ತಿರುವ ಸಚಿವ ಚಲುವರಾಯಸ್ವಾಮಿ ಅವರೇ ಸುಳ್ಳು ಹೇಳುವುದನ್ನು, ಹಬ್ಬಿಸುವುದನ್ನು ನಿಲ್ಲಿಸಿ. ಹಿಟ್ಲರನ ಮಂತ್ರಿ ಗೋಬೆಲ್ ಚಾಳಿ ಬಿಡಿ ಎಂದು ವಾಗ್ದಾಳಿ ನಡೆಸಿದೆ.
ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಕಾರು ಬಳಸುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆಯೇ? ಒಂದು ವೇಳೆ ಹೇಳಿದ್ದರೆ ಎಲ್ಲಿ, ಯಾವಾಗ, ಯಾರಿಗೆ ಹೇಳಿದ್ದರು? ಅಥವಾ ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರವನ್ನೀನಾದರೂ ಬರೆದಿದ್ದರೇ? ನೀವು ದಾಖಲೆ ಸಮೇತ ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಂಸದರಿಗೆ ಕೊಡಲಾಗುವ ಕಾರಿನ ಮೇಲೆ ಯಾರ ಮಾಲಿಕತ್ವವೂ ಇರುವುದಿಲ್ಲ. ಅದು ಹಿಂದಿನ ಸಂಸದರದೂ ಅಲ್ಲ, ಈಗಿನ ಸಂಸದರದೂ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆ ಸಂಪುಟ ದರ್ಜೆ ಸಚಿವರಾದ ನಿಮಗಿಲ್ಲವಲ್ಲ. ರಾಜ್ಯದ ಎಲ್ಲಾ ಸಂಸದರಿಗೂ ಕಾಂಗ್ರೆಸ್ ಸರ್ಕಾರದ ವತಿಯಿಂದ ಹೊಸ ಕಾರುಗಳನ್ನು ಕೊಡಲಾಯಿತು. ಆದರೆ, ಮಂಡ್ಯ ಮತ್ತು ಕೋಲಾರದ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಮಲ್ಲೇಶ್ ಬಾಬು ಅವರಿಗೆ ಹಳೆಯ ಕಾರುಗಳನ್ನು ಕೊಡಲಾಯಿತು. ಎಂದು ಯಾಕೆ ಹೇಳುತ್ತೀರಾ ಚೆಲುವರಾಯಸ್ವಾಮಿ ಅವರೇ? ಎಂದು ಆಕ್ರೋಶ ವ್ಯಕ್ಯಪಡಿಸಿದೆ.
ಐದು ವರ್ಷಗಳ ಹಳೆಯ ಕಾರಿನ ಬದಲು ಹೊಸ ಕಾರು ಕೊಡಿ ಎಂದು ಕೇಂದ್ರ ಸಚಿವರು ಕೇಳಿದ್ದರು. ಅದರಲ್ಲಿ ತಪ್ಪೇನಿದೆ? ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ ಹೊಸ ಕಾರುಗಳ ಕಥೆ ಹೊಸದಲ್ಲ, ನಿಮ್ಮ ಕಾರುಬಾರು ಕೂಡ ಜೋರಾಗಿ ನಡೆದಿದೆಯಲ್ಲ ? ಎಂದು ತಿರುಗೇಟು ನೀಡಿದೆ.