Mysore
20
overcast clouds
Light
Dark

ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್‌ 1 ದೃಢ; ಉಪಸಮಿತಿಯ ಮೊದಲ ಸಭೆ ನಡೆಸಿದ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಇಂದು ( ಡಿಸೆಂಬರ್‌ 26 ) ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯ ಕೊವಿಡ್‌ ಉಪ ಸಮಿತಿಯ ಸಭೆ ನಡೆದಿದೆ. ಕೊರೊನಾ ರೂಪಾಂತರಿ ಜೆಎನ್‌ 1 ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ಹಂಚಿಕೊಂಡಿದ್ದಾರೆ.

ನಿನ್ನೆಯ ( ಡಿಸೆಂಬರ್‌ 25 ) 60 ಸ್ಯಾಂಪಲ್‌ಗಳ ಪೈಕಿ 34 ಜೆಎನ್‌ 1 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ ದಿನೇಶ್‌ ಗುಂಡೂರಾವ್‌ ಟೆಸ್ಟ್‌ ಹೆಚ್ಚು ಮಾಡಿದಷ್ಟು ಸೋಂಕು ಹರಡುವಿಕೆ ಗೊತ್ತಾಗಲಿದೆ, ಹೀಗಾಗಿ ಇಂದಿನಿಂದ ದಿನನಿತ್ಯ 5000 ಟೆಸ್ಟಿಂಗ್‌ಗಳನ್ನು ಮಾಡಲಿದ್ದೇವೆ ಎಂದು ತಿಳಿಸಿರು.

ಹಿಂದೆ ಆದಂತಹ ತಪ್ಪುಗಳು ಈ ಬಾರಿ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಉಪತಳಿ ಪತ್ತೆಯಾಗಿರುವುದು ಆಶ್ಚರ್ಯವೇನಲ್ಲ, ಇದನ್ನು ನಿರೀಕ್ಷೆ ಮಾಡಿದ್ದೆವು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ವೇರಿಯಂಟ್‌ ಆಫ್‌ ಇಂಟರೆಸ್ಟ್‌ ಎಂದು ತಿಳಿಸಿದ್ದು ರಿಸ್ಕ್‌ ಫ್ಯಾಕ್ಟರಿ ಅಡ್ವೈಸರಿ ಬಂದಿಲ್ಲ, ಇದು ಸಮಾಧಾನಕರ ವಿಷಯವಾಗಿದ್ದು, ಆದರೂ ಎಚ್ಚರಿಕೆಯ ಅಗತ್ಯವಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಸಿಎಂ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದು, ಅವರ ಸಲಹೆ ಮೇರೆಗೆ ಐಸಿಯು ಪರಿಶೀಲನೆ ನಡೆಸಲಿದ್ದೇವೆ, ಆಕ್ಸಿಜನ್‌ ಕೊರತೆಯಾಗದಿರಲು ಸೂಚಿಸಿದ್ದೇವೆ. 436 ಸೋಂಕಿತರ ಪೈಕಿ 400 ಜನ ಹೋಮ್‌ ಐಸೋಲೇಷನ್‌ನಲ್ಲಿದ್ದಾರೆ, 7 ಜನ ಐಸಿಯುನಲ್ಲಿದ್ದಾರೆ. ಖುದ್ದಾಗಿ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳೇ ಟ್ರ್ಯಾಕಿಂಗ್‌ ಮಾಡಲಿದ್ದಾರೆ ಎಂದು ತಿಳಿಸಿದರು.

ಇನ್ನು 4 ಆಕ್ಸಿಜನ್‌ ಕಂಟೈನರ್‌ ಖರೀದಿ ಮಾಡಲಿದ್ದೇವೆ ಎಂದು ತಿಳಿಸಿದ ಗುಂಡೂರಾವ್‌ ಇದು ಆಸ್ಪತ್ರೆಯಲ್ಲಿರುವ ಹಾಗೂ ಹೋಮ್‌ ಐಸೋಲೇಷನ್‌ ಆಗಿರುವ ಸೋಂಕಿತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸೋಂಕಿತರು ಮೊದಲ ಹಾಗೂ ಎರಡನೇ ಡೋಸ್‌ ಪಡೆದಿದ್ದು, ಅವರಿಗೆ ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡಲಾಗುತ್ತೆ, ಇದಕ್ಕಾಗಿ ಕೇಂದ್ರದಿಂದ ಮುನ್ನೆಚ್ಚರಿಕೆಯಾಗಿ 30 ಸಾವಿರ ವಾಕ್ಸಿನ್‌ ಕೇಳಲಾಗಿದೆ, ಸಭೆಯಲ್ಲಿ ಇದರ ಖರೀದಿಗೆ ನಿರ್ಧಾರ ಮಾಡಲಾಗಿದೆ ಎಂದೂ ಸಹ ಹೇಳಿಕೆ ನೀಡಿದರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ