Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿದ ಜೆಡಿಎಸ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯ ಸಾರಿಗೆ ನೌಕರರು ಪರದಾಡುವಂತಾಗಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆ ಸೇರಿದಂತೆ ಗ್ಯಾರಂಟಿಗಳ ಹೊಡೆತಕ್ಕೆ ರಾಜ್ಯದ ಸಾರಿಗೆ ಸಂಸ್ಥೆಗಳು ದಿವಾಳಿಯತ್ತ ಮುಖಮಾಡಿದೆ ಎಂದು ಕಿಡಿಕಾರಿದೆ.

ನಾಡಿನ ಜನರ ಸಂಚಾರದ ಕೊಂಡಿಯಾಗಿರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿ , ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿ ಒತ್ತಾಡುತ್ತಿದೆ. ಖಜಾನೆಯಲ್ಲಿ ಹಣವಿಲ್ಲದೇ ಕಾಂಗ್ರೆಸ್‌ ಸರ್ಕಾರ ಸಾರಿಗೆ ನೌಕರರ ಪಿಎಫ್‌, ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಸೇರಿದಂತೆ ಒಟ್ಟು 1,787 ಕೋಟಿ ರೂ. ಬಾಕಿ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಆರ್ಥಿಕ ಸಮಸ್ಯೆಯಿಂದ ನೊಂದಿರುವ ಸಾರಿಗೆ ನೌಕರರು ಡಿಸೆಂಬರ್‌ 31ರಂದು ರಾಜ್ಯದಲ್ಲಿ ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ಅಸಹಾಯಕತೆಗೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದೆ.

ಗುತ್ತಿಗೆದಾರ ಸಚಿನ್‌ ಪ್ರಕರಣದಲ್ಲಿ ನಿಷ್ಪಕ್ಷಪಾತದ ತನಿಖೆಗೆ ಜೆಡಿಎಸ್‌ ಆಗ್ರಹ

ಗುತ್ತಿಗೆದಾರ ಸಚಿನ್‌ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತನ ರಕ್ಷಣೆಗೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಅಧಿಕಾರ ದುರ್ಬಕೆ ಮಾಡಿಕೊಳ್ಳುತ್ತಿದೆ. ಟೆಂಡರ್‌ ವಂಚನೆ ಮಾಡಿರುವ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರ್‌ 15 ಲಕ್ಷ ಲಂಚ ಪಡೆದು, ಹತ್ಯೆಯ ಬೆದರಿಕೆ ಹಾಕಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಗುತ್ತಿಗೆದಾರ ಸಚಿನ್‌ ಉಲ್ಲೇಖಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಲೀನ್‌ ಚೀಟ್‌ ಸರ್ಕಾರ, ಸಚಿವರ ಆಪ್ತನನ್ನು ಬಂಧಿಸಿ ತನಿಖೆ ನಡೆಸುವ ಬದಲು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಪೇದೆಗಳನ್ನು ಅಮಾನತು ಮಾಡಿ ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತಿದೆ. ಹೀಗಾಗಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರದ ಬಗ್ಗೆಯೂ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: