ಭಾನುವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕಲ್ಲಡ್ಕ ಪ್ರಭಾಕರ ಭಟ್‌ರ ಈ ಹೇಳಿಕೆಗೆ ಮುಸ್ಲಿಂ ಸಮುದಾಯ ಕಿಡಿಕಾರಿತ್ತು. ಇವರು ಕೋಮು ಗಲಭೆಗೆ ಉತ್ತೇಜನ ನೀಡುವ ಹೇಳಿಕೆ ಹಾಗೂ ಮುಸ್ಲಿಂ ಮಹಿಳೆಯರ ಘನತೆಗೆ ಚ್ಯುತಿ ಬರುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಂಧಿಸುವಂತೆ ಒತ್ತಾಯಿಸಲಾಗಿತ್ತು.
ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ನಜ್ಮಾ ನಜೀರ್ ಎಂಬುವವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರನ್ನು ದಾಖಲಿಸಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಧರ್ಮಗಳ ನಡುವೆ ಗಲಭೆ ಹಾಗೂ ಅಶಾಂತಿ ಸೃಷ್ಠಿಸುವ ಹಾಗೆ ಮಾತಾನಾಡಿ ನ್ಯಾಯಾಂಗ ವ್ಯವಸ್ಥೆಯನ್ನೂ ಸಹ ಅಣಕಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಮೇರೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್ 354, 294, 509, 506, 153A, 295, 295A ಹಾಗೂ 298 ಅಡಿಯಲ್ಲಿ ಜಾಮೀನುರಹಿತ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೈಕೋರ್ಟ್ ಮೊರೆ ಹೋಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಕಲ್ಲಡ್ಕ ಪ್ರಭಾಕರ ಭಟ್‌ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇತ್ತ ಶ್ರೀರಂಗಪಟ್ಟಣ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಹ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರೋಗ್ಯದ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಿದರೂ, ತನಿಖೆಗೆ ಪೊಲೀಸರಿಗೆ ಅವಕಾಶ ನೀಡಲಾಗಿದೆ.