ದಾವಣಗೆರೆ: ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಕನಕನ ಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಕೀಳರಿಮೆ ಮೆಟ್ಟಿ ಮೇಲೇಳುವುದಕ್ಕೆ ದಾಸಶ್ರೇಷ್ಠ ಕನಕದಾಸರ ಬಂಡಾಯದ ಮಾದರಿ ನಮ್ಮ ಅಂಗೈಯಲ್ಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಕನಕ ನೌಕರರ ಬಳಗ ಮತ್ತು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
“ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು” ಎನ್ನುವ ಮಾತಿದೆ. ಇವತ್ತು ನಮ್ಮ ಸಮುದಾಯದ ನಾನು ಮತ್ತು ಈ ಮಕ್ಕಳು ಪ್ರತಿಭಾವಂತರಾಗಿ ಇಲ್ಲಿ ಗೌರವಿಸಲ್ಪಡುತ್ತಿದ್ದೇವೆ ಎಂದರೆ ಇದಕ್ಕೆ ನಮ್ಮ ಹಿರಿಯರು ಮತ್ತು ಹಿಂದಿನವರು ನಡೆಸಿದ ಹೋರಾಟಗಳು ಕಾರಣ.
ಅಕ್ಷರ ಕಲಿತರೆ ಕಿವಿಗೆ ಕಾದ ಸೀಸ ಸುರಿಯುವ ಶಿಕ್ಷೆ ವಿಧಿಸುತ್ತಿದ್ದ ಕಾಲದಿಂದ ನಮ್ಮದೇ ಆದ ವಿದ್ಯಾವರ್ಧಕ ಸಂಘ ಕಟ್ಟಿಕೊಂಡು SSLC ಯಿಂದ MBBS ವರೆಗೂ ಸಾವಿರಾರು ಪ್ರತಿಭಾವಂತರನ್ನು ಪುರಸ್ಕರಿಸುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಈ ಸಾಧನೆಯ ಹಿಂದೆ ಇರುವ ಪ್ರತೀ ಹೆಜ್ಜೆ ಗುರುತುಗಳನ್ನೂ ನಾವು ಅರಿತುಕೊಳ್ಳಬೇಕಿದೆ ಎಂದರು.
ದಾಸಶ್ರೇಷ್ಠ ಕನಕದಾಸರು ಅಂದರೆ ನಮಗೆಲ್ಲಾ ಭಕ್ತಿ ಬರುತ್ತದೆ. ಆದರೆ ಕನಕದಾಸರ ಬದುಕಿನ ಸಂದೇಶ ಕೇವಲ ಅವರನ್ನು ಭಕ್ತಿಯಿಂದ ಪೂಜಿಸುವುದಾಗಿರಲಿಲ್ಲ.
ಎಳೆಯ ವಯಸ್ಸಿನಿಂದಲೂ ಕನಕರ ಬಗ್ಗೆ ಮಾತನಾಡುವಾಗ ಕನಕರ ಹೋರಾಟವನ್ನು ತಿಳಿಯುವುದರ ಬದಲಾಗಿ ಕನಕನ ಕಿಂಡಿಯ ಬಗ್ಗೆ ತಿಳಿಯುವುದರಲ್ಲಿ ನಮಗೆ ಹೆಚ್ಚು ಉತ್ಸಾಹ ಮೂಡಿಸಿರುವುದರ ಹಿಂದೆಯೂ ಒಂದು ಸಾಂಸ್ಕೃತಿಕ ರಾಜಕಾರಣ ಇದೆಯಲ್ಲವೇ ಎಂದು ಪ್ರಶ್ನಿಸಿದರು.
ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಪೂಜ್ಯರಾದ ಜಗದ್ಗುರು ಶ್ರೀ ಡಾ.ನಿರಂಜನಾನಂದಪುರಿ ಮಹಾ ಗುರುಗಳು ದಿವ್ಯ ಸಾನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ, ಬಾಲ ಭವನ ಅಧ್ಯಕ್ಷ ಬಿ.ಆರ್. ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





