ಬೆಂಗಳೂರು: ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೆಲೆ ಏರಿಕೆ ಮಾಡುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿದ್ದು, ನಂದಿನಿ ಹಾಲಿನ ದರ 4ರೂ. ಹೆಚ್ಚಿಸಿ ರಾಜ್ಯದ ಜನರಿಗೆ ಯುಗಾದಿಗೆ ಉಡುಗೊರೆ ನೀಡಿದೆ. ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ, ಬೆಲೆ ಏರಿಸುವುದನ್ನೇ ನಿತ್ಯ ಕಾಯಕವಾಗಿಸಿಕೊಂಡು ಜನಸಾಮಾನ್ಯರನ್ನು ದಿನೇ ದಿನೇ ಸುಲಿಗೆ ಮಾಡುತ್ತಿದೆ. ಅಲ್ಲದೇ ನಂದಿನಿ ಹಾಲಿನ ದರ 4 ರೂ. ಹೆಚ್ಚಿಸಿ ರಾಜ್ಯದ ಜನರಿಗೆ ಯುಗಾದಿಗೆ ಉಡುಗೊರೆ ನೀಡಿದೆ ಕಿಡಿಕಾರಿದೆ.
2 ವರ್ಷದಲ್ಲಿ 3 ಬಾರಿ ಹಾಲಿನ ದರ ಏರಿಕೆ; ಲೀ. 9 ಹೆಚ್ಚಳವಾಗಿದೆ. ಮೊದಲು 2023ರ ಆಗಸ್ಟ್‌ನಲ್ಲಿ ಹಾಲಿನ ದರ ಲೀ. 3 ರೂ. 2024ರ ಜೂನ್‌ನಲ್ಲಿ ಹಾಲಿನ ದರ ಲೀ. 2.10 ರೂ. ಹೆಚ್ಚಳ ಮಾಡಿತ್ತು. ಅಂತೆಯೇ ಇದೀಗ 2025ರ ಮಾರ್ಚ್‌ನಲ್ಲಿ ಹಾಲಿನ ದರ ಲೀ. 4 ಏರಿಕೆ ಮಾಡಿದೆ. ಹೀಗಾಗಿ ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಿದೆ, ಜೊತೆಗೆ ಹಾಲಿನ ಪ್ರೋತ್ಸಾಹ ಧನವನ್ನು ರೈತರಿಗೆ ಸರಿಯಾಗಿ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಕಳೆದ 2 ವರ್ಷದಲ್ಲಿ 3ನೇ ಬಾರಿಗೆ ಹಾಲಿನ ಬೆಲೆ ಏರಿಸಿ ಸಂಗ್ರಹಿಸುತ್ತಿರುವ ಸಾವಿರಾರು ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ಸೇರುತ್ತಿದೆ ? ಎಂದು ಪ್ರಶ್ನಿಸಿದೆ.