Mysore
21
overcast clouds
Light
Dark

ಡಿಕೆಶಿ, ಎಲ್.ಆರ್.ಶಿವರಾಮೇಗೌಡ ವಿರುದ್ಧ ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಜಾತ್ಯತೀತ ಜನತಾದಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಗರದ ಪ್ರೀಢಂ ಪಾರ್ಕ್ʼನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅವರಿಬ್ಬರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಡಿಕೆಶಿ ಮತ್ತು ಶಿವರಾಮೇಗೌಡ ವಿರುದ್ಧ ಕೂಡಲೇ ಎಸ್‌ಐಟಿ ಕೇಸ್ ದಾಖಲಿಸಿ ವಿಚಾರಣೆ ನಡೆಸಬೇಕು, ಉಪ ಮುಖ್ಯಮಂತ್ರಿ ಹುದ್ದೆಯಿಂದ ಡಿಕೆಶಿಯನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡನಾಡಿನ ಏಕೈಕ ಮಾಜಿ ಪ್ರಧಾನಿಗಳಾದ ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೋಲಿನ ಭಯದಿಂದ ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ, ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅವರನ್ನು ಮುಖ್ಯಮಂತ್ರಿಗಳು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಜವಾಬ್ದಾರಿಯುತ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಅದರ ಮಹತ್ವ ಅರಿಯದೇ ಅವರು ಅಶ್ಲೀಲ ಪೆನ್ ಡ್ರೈವ್ ಗಳ ಹಂಚಿಕೆಯಲ್ಲಿ ಶಾಮೀಲಾಗಿದ್ದಾರೆ. ಶಿವರಾಮೇಗೌಡ, ದೇವರಾಜೇಗೌಡ ನಡುವಿನ ಮೊಬೈಲ್ ಸಂಭಾಷಣೆ ಇದನ್ನು ಬಹಿರಂಗ ಮಾಡಿದೆ. ಕೂಡಲೇ ತನಿಖಾ ತಂಡ ಇವರಿಬ್ಬರಿಗೂ ಸಮನ್ಸ್ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಷದ ಹಿರಿಯ ಮುಖಂಡರಾದ ಜವರಾಯಿ ಗೌಡರು, ನಗರ ಘಟಕದ ಕಾರ್ಯಾಧ್ಯಕ್ಷರಾದ ರೇವಣ್ಣ, ನಗರ ಯುವ ಜನತಾದಳ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ತಿಮ್ಮೇಗೌಡ, ಅಂದಾನಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾವ್, ಕನ್ಯಾಕುಮಾರಿ, ಮಂಗಳಾ‌, ಗೋಪಾಲ್ ಸೇರಿದಂತೆ‌ ಪಕ್ಷದ ಅನೇಕು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.