ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕ 2025ʼ ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ರಾಜನಾಥ್ ಸಿಂಗ್ ಚಾಲನೆ ನೀಡಿ ಮಾತನಾಡಿದರು.
ಭವಿಷ್ಯದ ಆರ್ಥಿಕತೆ ರೂಪಿಸುವ ಸಮಾವೇಶ ಇದಾಗಿದ್ದು, ಭಿನ್ನಭಿಪ್ರಾಯ ಮರೆತು ದೇಶದ ಅಭಿವೃದ್ದಿಗೆ ಎಲ್ಲರು ಸಹಕರಿಸಬೇಕು. ಜಗತ್ತಿನ ಉದ್ದಿಮೆದಾರರ ಹೂಡಿಕೆಗೆ ಕರ್ನಾಟಕ ರಾಜ್ಯ ಉತ್ತಮವಾಗಿದೆ. ಸುಮಾರು 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯಾಗುವ ಸಂಭವವಿದೆ ಎಂದು ಹೇಳಿದರು.
ಫೆ.11ರಿಂದ ಫೆ.14 ರವರೆಗೆ ಈ ಸಮಾವೇಶ ನಡೆಯಲಿದ್ದು, ಫ್ರಾನ್ಸ್, ನೆದರ್ಲೆಂಡ್ಸ್, ಜಪಾನ್, ದಕ್ಷಣ ಕೊರಿಯಾ, ಇಂಗ್ಲೆಂಡ್, ಸಿಂಗಾಪುರ ಸೇರಿದಂತೆ 19 ದೇಶದ ಉದ್ಯಮಿಗಳು ಭಾಗವಹಿಸಿದ್ದಾರೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಗೃಹ ಸಚಿವ ಜಿ. ಪರಮೇಶ್ವರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸಾಧಾಕರ್ ಸೇರಿದಂತೆ ಹಲವು ಉದ್ಯಮಿಗಳು ಉಪಸ್ಥಿತರಿದ್ದರು.