ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯ ಗೊಂದಲವನ್ನು ಬಗೆಹರಿಸಲು ಇದೇ ೨೪ ರಂದು ವಿಶೇಷ ಸಚಿವ ಸಂಪುಟ ಸಭೆ ನಿಗದಿ ಮಾಡಿದೆ.
ಒಳ ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವೆ ಅಸಮಾಧಾನಗಳಿವೆ. ಪರಿಶಿಷ್ಟ ಜಾತಿಯ ಇತರೆ ಅಲೆಮಾರಿ ಸಮುದಾಯಗಳೂ ಕೂಡ ರಾಜ್ಯ ಸರ್ಕಾರದ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಅಸಮಾಧಾನ ಇದೆ.
ಎಸ್‌ಸಿ ಸಮುದಾಯದಲ್ಲಿರುವ 101ಕ್ಕೂ ಹೆಚ್ಚು ಉಪ ಜಾತಿಗಳಲ್ಲಿ ಅತಿ ಹೆಚ್ಚು ಹಿಂದುಳಿದಿರುವ ಸಮುದಾಯಗಳಿಗೆ ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಒಳಮೀಸಲಾತಿಯ ಮುಖ್ಯವಾದ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಈ ಹಿಂದೆ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ ದಾವಣಗೆರೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿತ್ತು.
ಎಸ್‌ಸಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಹಾಗಾಗಿ ಶುಕ್ರವಾರ ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ.





