ಬೆಂಗಳೂರು: ರಾಜ್ಯ ಪಡಿತರ ಚೀಟಿದಾರರಿಗೆ ಆಹಾರ ಮತ್ತು ಸರಬರಾಜು ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಆಹಾರದ ಕಿಟ್ ನೀಡಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಗೆ ಹಣವನ್ನು ಖಾತೆಗೆ ವರ್ಗಾವಣೆ ಮಾಡುತ್ತಿತ್ತು.
ನಂತರದ ದಿನಗಳಲ್ಲಿ ಅಂದರೆ ಈಗ ಹಣದ ಬದಲಾಗಿ 5 ಕೆಜಿ ಹೆಚ್ಚುವರಿ ಅಕ್ಕಿಯನ್ನೇ ನೀಡುತ್ತಿದೆ. ಇದೀಗ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಆಹಾರದ ಕಿಟ್ ನೀಡಲು ಆಹಾರ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆಹಾರದ ಕಿಟ್‌ನಲ್ಲಿ ಸಕ್ಕರೆ, ಉಪ್ಪು, ತೊಗರಿಬೇಳೆ, ಕಾಫಿಪುಡಿ, ಟೀಪುಡಿ, ಅಡುಗೆ ಎಣ್ಣೆ, ಗೋಧಿ ಇರಲಿದ್ದು, ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಮಾತ್ರ ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಜುಲೈ.2ರಂದು ಚಿಕ್ಕಬಳ್ಳಾಪುರ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಇದಕ್ಕೆ ಸಮ್ಮತಿ ಸಿಕ್ಕಿದರೆ ಸದ್ಯದಲ್ಲೇ ಆಹಾರ ಕಿಟ್ ನೀಡುವ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ.





