ಬೆಂಗಳೂರು: ಮೈಸೂರು, ಚಾಮರಾಜನಗರ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸದಸ್ಯ ಡಾ.ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಬರುವ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೂ ಆ್ಯಂಬುಲೆನ್ಸ್ ಒದಗಿಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಅಲ್ಲದೆ ಈ ಎರಡೂ ಜಿಲ್ಲೆಗಳಿಗೆ ಅಡ್ವಾನ್ಸ್ ಲೈಫ್ ಸಪೋರ್ಟ್ ಎಂಬ ವಿನೂತನ ಹಾಗೂ ಆಧುನಿಕ ಸೌಲಭ್ಯವುಳ್ಳ ಆ್ಯಂಬುಲೆನ್ಸ್‌ಳನ್ನು ಒದಗಿಸುತ್ತೇವೆ ಎಂದರು.
ಈ ಆ್ಯಂಬುಲೆನ್ಸ್‌ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರಲಿವೆ. ಗಾಯಾಳು ಇಲ್ಲವೇ ಇತರೆ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಆ್ಯಂಬುಲೆನ್ಸ್‌ನಲ್ಲಿ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿಗೆ ಪ್ರತ್ಯೇಕವಾಗಿ ಟ್ರಾಮಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಮ ನಿಯಮಾವಳಿ ಪ್ರಕಾರ ಪ್ರತ್ಯೇಕವಾಗಿ ಇದನ್ನು ಸ್ಥಾಪನೆ ಮಾಡಲು ಅವಕಾಶವಿಲ್ಲ.
ಇರುವ ಕಟ್ಟಡದಲ್ಲೇ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ನಿರ್ವಹಣೆ ಮಾಡಲು ಸೂಚಿಸಬಹುದು. ಪ್ರತ್ಯೇಕ ಕಟ್ಟಡ ಬೇಕು ಎಂದರೆ ಆರ್ಥಿಕ ಹೊರೆ, ಸಿಬ್ಬಂದಿ ಹೊರೆ ಬೀಳುತ್ತದೆ. ಇರುವ ಕಟ್ಟಡಗಳಲ್ಲೇ ಇದನ್ನು ನಿರ್ವಹಣೆ ಮಾಡಲು ಸೂಚನೆ ನೀಡಲಾಗುವುದು.
ಒಂದು ವೇಳೆ ನಂಜನಗೂಡಿಗೆ ಪ್ರತ್ಯೇಕವಾದ ಟ್ರಾಮಾ ಕೇಂದ್ರ ಬೇಕು ಎಂದರೆ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಡಾ.ಯತೀಂದ್ರ, ನಂಜನಗೂಡಿಗೆ ಪ್ರತ್ಯೇಕವಾಗಿ ಟ್ರಾಮಾ ಕೇಂದ್ರ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಅಪಘಾತ, ಇಲ್ಲವೇ ಬೇರೆ ಘಟನೆಗಳು ಸಂಭವಿಸಿದರೆ ನಂಜನಗೂಡಿನಿಂದ ಮೈಸೂರಿಗೆ ಹೋಗಲು ದೂರವಾಗುತ್ತದೆ. ಹೀಗಾಗಿ ಪ್ರತ್ಯೇಕ ಟ್ರಾಮಾ ಕೇಂದ್ರ ಸ್ಥಾಪಿಸುವಂತೆ ಸಚಿವರಿಗೆ ಮನವಿ ಮಾಡಿದರು.





