ಹೊಸದಿಲ್ಲಿ : ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರದ ಮೂಲಕ ಪ್ರತೀಕಾರ ತೀರಿಸಿಕೊಂಡಿರವ ಭಾರತ, ಇದೀಗ ಭಯೋತ್ಪಾದನೆ ನಿರ್ಮೂಲನೆಗೆ ಹೊಸ ಅಸ್ತ್ರ ಪ್ರಯೋಗಿಸಿದೆ. ಭಯೋತ್ಪಾದನಾ ಕೃತ್ಯಕ್ಕೆ ಪೂರ್ಣವಿರಾಮ ಹಾಕಲು ಭಾರತ ಪ್ರಮುಖ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಲು ಕೇಂದ್ರ ಸರ್ಕಾರ 7 ಸರ್ವ ಪಕ್ಷ ನಿಯೋಗ ರಚಿಸಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿ ಜಾಗತಿಕ ಮಟ್ಟದಲ್ಲಿ ಪಾಕ್ ಉಗ್ರ ಮುಖವಾಡ ಬಯಲು ಮಾಡಲು ಸರ್ವಪಕ್ಷ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಬಣಗಳಾಗಿ ವಿಂಗಡಿಸಲಾದ ನಿಯೋಗಗಳು ಮೇ 22 ಅಥವಾ 23ರ ವೇಳೆಗೆ 10 ದಿನಗಳ ಕಾಲ ಪ್ರಯಾಣಿಸಲಿವೆ. ಸಂಸದರ ಜೊತೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿ ವಿಶ್ವದ ಮುಂದೆ ಪಾಕ್‌ನ ಮುಖವಾಡವನ್ನು ಕಳಚಲಿದ್ದಾರೆ.
ಸರ್ವಪಕ್ಷ ಸಂಸದರ ನಿಯೋಗದಲ್ಲಿ ಯಾರಿದ್ದಾರೆ?
ತಂಡ 1 : ಶಶಿ ತರೂರ್, ಕಾಂಗ್ರೆಸ್
ತಂಡ 2 : ರವಿಶಂಕರ್ ಪ್ರಸಾದ್, ಬಿಜೆಪಿ
ತಂಡ 3 : ಸಂಜಯ್ ಕುಮಾರ್ ಝಾ, ಜೆಡಿಯು
ತಂಡ 4 : ಬೈಜಯಂತ್ ಪಾಂಡಾ, ಬಿಜೆಪಿ
ತಂಡ 5 : ಕನಿಮೋಳಿ ಕರುಣಾನಿಧಿ, ಡಿಎಂಕೆ
ತಂಡ 6 : ಸುಪ್ರಿಯಾ ಸುಳೆ, ಎನ್‌ಸಿಪಿ
ತಂಡ 7 : ಶ್ರೀಕಾಂತ್ ಏಕನಾಥ್ ಶಿಂಧೆ, ಶಿವಸೇನೆ
ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವು ಸೌದಿ ಅರೇಬಿಯಾ, ಕುವೈತ್, ಬಹರೇನ್ ಮತ್ತು ಅಲ್ಜೀರಿಯಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದರೆ, ಸುಪ್ರಿಯಾ ಸುಳೆ ಅವರ ತಂಡ ಓಮನ್, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಈಜಿಪ್ಟ್‌ಗೆ ಪ್ರಯಾಣಿಸಲಿದೆ.





