ತುಮಕೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಯಾರಿಗೂ ಮೋಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ಅವರು, ೬ನೇ ವೇತನ ಆಯೋಗ ಜಾರಿಗೆ ತಂದಿದ್ದು ಸಹ ನಮ್ಮ ಸರ್ಕಾರ. ೭ನೇ ವೇತನ ಅಯೋಗ ಶಿಫಾರಸು ಜಾರಿಗೆ ೧೮ ಸಾವಿರ ಕೋಟಿ ಹಾಗೂ ಓಪಿಎಸ್ ಜಾರಿಗೆ ನೂರಾರು ಕೋಟಿ ರೂ ಬೇಕು. ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಅದಕ್ಕಾಗಿ ತಾಳ್ಮೆಯಿಂದ ಇರಿ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ತೆರಿಗೆ ಕಟ್ಟುತ್ತಿವೆ. ಇದಕ್ಕೆ ಅನುಗುಣವಾಗಿ ನಮಗೆ ವಾಪಸ್ ಬರುತ್ತಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇವೆ. ನಮ್ಮಲ್ಲಾದ ಬದಲಾವಣೆಯಿಂದ ಕರ್ನಾಟಕ ಶಕ್ತಿಯುತವಾಗಿದ್ದು, ಇತರೆ ರಾಜ್ಯಗಳಿಗೂ ಶಕ್ತಿ ನೀಡಲು ಈ ಹಣ ಬಳಕೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅನುದಾನಿತ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧಿಸಿದಂತೆ ಸರ್ಕಾರ ಶೀಘ್ರವೇ ಸೂಕ್ತ ನಿರ್ಧಾರಕ್ಕೆ ಬರಲಿದೆ. ನಾನು ಕೂಡ ಶಿಕ್ಷಣ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಗೌರವಧನ ಸಾಕಾಗುವುದಿಲ್ಲ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಓಪಿಎಸ್ ಜಾರಿಗೆ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.