ಬೆಂಗಳೂರು : ಕೃಷಿ ಇಲಾಖೆಯಲ್ಲಿ 1 ಸಾವಿರ ಖಾಲಿ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಿ 2-3 ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಶೇ.70 ರಷ್ಟು ಜನ ಕೃಷಿ ಅವಲಂಬಿತರಾಗಿದ್ದಾರೆ. ಬೇಸಾಯವನ್ನು ಲಾಭದಾಯಕವಾಗಿಸಿದರೆ ಅಷ್ಟು ಜನರ ಬದುಕು ಸುಧಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.
ಇಲಾಖೆಯಲ್ಲಿ ಶೇ.57ರಷ್ಟು ಸಿಬ್ಬಂದಿಗಳ ಕೊರತೆ ಇದೆ. ಅಂದ ಮಾತ್ರಕ್ಕೆ ಯಾವುದೇ ಯೋಜನೆಗಳನ್ನು ನಿಲ್ಲಿಸಿಲ್ಲ. ಜಲಾನಯನ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿ ಕೇಂದ್ರ ಸರಕಾರದಿಂದ 300 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗಿದೆ. ಕೃಷಿ ಹೊಂಡ ನಿರ್ಮಾಣ ಯೋಜನೆಯನ್ನು 224 ಕ್ಷೇತ್ರಗಳಿಗೂ ವಿಸ್ತರಣೆ ಮಾಡಲಾಗಿದೆ ಎಂದರು.
ಒಂದು ಸಾವಿರ ಹುದ್ದೆಗಳ ನೇಮಕಾತಿಯಾದ ಬಳಿಕ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಣೆಯಾಗಲಿದೆ. ಆವರೆಗೂ ಪ್ರಭಾರ ಜವಾಬ್ದಾರಿಗಳಲ್ಲೇ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.
ಕೃಷಿಯಲ್ಲಿ ಕಡಿಮೆ ನೀರಿನ ಬಳಕೆ, ತಂತ್ರಜ್ಞಾನ, ಹೆಚ್ಚಿನ ಇಳುವರಿ- ರೋಗನಿರೋಧಕ ತಳಿ ಸೇರಿದಂತೆ ಹಲವು ಸುಧಾರಣೆ ಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಕೃಷಿ ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ ಎಂದರು.





