Mysore
23
broken clouds
Light
Dark

ವಾಲ್ಮೀಕಿ, ಮುಡಾ ಹಗರಣ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಪತ್ತೆ

ಬಾಗಲಕೋಟೆ: ರಾಜ್ಯ ರಾಜಕೀಯದಲ್ಲಿ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿರುವ ವಾಲ್ಮೀಕಿ ನಿಗಮ ಹಗರಣದ ತನಿಖೆ ಚುರುಕಾಗಿರುವ ನಡುವೆಯೇ ಇದೀಗ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್‌ ಖಾತೆಯಲ್ಲಿದ್ದ 2.47 ಕೋಟಿಗೂ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಗಮನಕ್ಕೆ ಬಾರದೇ ಈ ಹಣದ ವರ್ಗಾವಣೆ ಆಗಿದೆ ಎಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಮಾಹಿತಿ ಬರುತ್ತಲೇ ಬಾಗಲಕೋಟೆಯ ಐಡಿಬಿಐ ಬ್ಯಾಂಕ್‌ ಮ್ಯಾನೇಜರ್‌ ಮತ್ತು ಸಿಬ್ಬಂದಿ ವಿರುದ್ಧ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಜುಲೈ.11ರಂದು ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಕುರಿತು ಯಾವುದೇ ಪರಿಶೀಲನೆ ನಡೆಸದೇ ಹೋಗಿದ್ದು ಅಚ್ಚರಿಕೆ ಕಾರಣವಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ 2.47 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಕುರಿತು ಈಗಾಗಲೇ ನಮ್ಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಹಗರಣದಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.