Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ʼಬಿಹಾರʼ ಗೆದ್ದರೆ ಎಲ್ಲಾ ʼಹುದ್ದೆʼ ಗೆದ್ದಂತೆ : ಡಿಸಿಎಂ ಡಿ.ಕೆ ಶಿವಕುಮಾರ್‌

ಬೆಂಗಳೂರು : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಘಟಬಂಧನ್ ಗೆಲ್ಲಿಸಿ ಅಧಿಕಾರಕ್ಕೆ ತಂದರೆ, ನನಗೆ ಎಲ್ಲಾ ಹುದ್ದೆಗಳು ಸಿಕ್ಕಂತೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿದ್ದಾರೆಯೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಹಾರ ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಇರುವ ಬಿಹಾರಿ ಸಮುದಾಯದ ಜೊತೆ ಚರ್ಚೆ ನಡೆಸುವ ಸಂದರ್ಭದಲ್ಲಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವ ಬಯಕೆ ಇದೆ ಎಂದು ಬಿಹಾರದ ಮೂಲದ ಪ್ರಮುಖರು ಅಭಿಲಾಷೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ್‌ನನ್ನು ಗೆಲ್ಲಿಸಿದರೆ ನನಗೆ ಎಲ್ಲಾ ರೀತಿಯ ಸ್ಥಾನಗಳನ್ನು ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ತಿಂಗಳ ೨೧ರ ರೊಳಗಾಗಿ ತಮಗೆ ಅಧಿಕಾರ ಬಿಟ್ಟುಕೊಡಬೇಕೆಂದು ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವದಂತಿಗಳು ವ್ಯಾಪಕವಾಗಿವೆ.

ಇದನ್ನು ಓದಿ: ಬಿಹಾರ ವಿಧಾನಸಭೆ ಚುನಾವಣೆ: ಮಹಾಘಟಬಂಧನ್‌ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಹೆಸರು ಘೋಷಣೆ

ಇತ್ತೀಚೆಗೆ ಲಾಲ್‌ಬಾಗ್‌ನಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿದಾಗ ಹಲವಾರು ಸಾರ್ವಜನಿಕರು ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದರು. ಆಗಲೂ ಶಿವಕುಮಾರ್, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿ, ನನ್ನ ಬಗ್ಗೆ ಚರ್ಚೆ ಬೇಡ ಎಂದು ಹೇಳುವ ಮೂಲಕ ಧ್ವನಿ ಎತ್ತಿದವರನ್ನು ತಣ್ಣಗಾಗಿಸಿದರು.

ಪಕ್ಷದ ಶಾಸಕರಿಗೂ ಅನೇಕ ಬಾರಿ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಪಕ್ಷದ ಕಚೇರಿ ತಮಗೆ ದೇವಸ್ಥಾನವಿದ್ದಂತೆ, ಯಾವುದೇ ಅವಕಾಶಗಳಾದರೂ ವರಿಷ್ಠರಿಂದಲೇ ದೊರೆಯಬೇಕು ಎಂಬುದು ಶಿವಕುಮಾರ್ ಅವರ ಬಲವಾದ ನಂಬಿಕೆ. ಈ ಕಾರಣಕ್ಕೆ ರಾಜಕೀಯ ಚರ್ಚೆಗಳಿಗೆ ಅವರು ಇಂಬು ನೀಡುತ್ತಿಲ್ಲ. ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ರಾಜ್ಯ ರಾಜಕೀಯದಲ್ಲಿದೆ. ಹಾಗಿದ್ದರೂ ತಾವು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಅಲ್ಲ ಎಂದು ಪರೋಕ್ಷ ಸಂದೇಶದ ಮೂಲಕ ಶಿವಕುಮಾರ್ ಹೈಕಮಾಂಡ್‌ಗೆ ಯಾವ ರೀತಿಯ ಮಾಹಿತಿ ರವಾನೆ ಮಾಡುತ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್‌ನ ಒಳ ವಲಯದಲ್ಲಿ ಹೇಳುತ್ತಿರುವಂತೆ ನವೆಂಬರ್ ಕ್ರಾಂತಿ ನಡೆಯಲಿದೆಯೇ ಅಥವಾ ಎಲ್ಲವೂ ವದಂತಿಗಳೇ ಎಂಬ ಅನುಮಾನ ಕಾಡಲಾರಂಭಿಸಿದೆ.

Tags:
error: Content is protected !!