Mysore
25
overcast clouds
Light
Dark

ಮೋದಿ ತಮ್ಮ ಅವಧಿಯಲ್ಲಿನ 10 ಸಾಧನೆ ಹೇಳಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ: ಸಿಎಂ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿನ ಹತ್ತು ವರ್ಷಗಳಲ್ಲಿ 10 ಸಾಧನೆ ಹೇಳಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಸವಾಲ್‌ ಎಸೆದಿದ್ದಾರೆ.

ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಾನು ಪ್ರಮಾಣ ವಚನ ಸ್ವೀಕರಿಸಿದ ನಂತರ ಕೊಟ್ಟ ಮಾತಿನಂತೆ ಕಾಂಗ್ರೆಸ್‌ನ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ. ಆದರೆ ಕಳೆದ 10 ವರ್ಷಗಳಿಂದ ದೇಶವನ್ನಾಳುತ್ತಿರುವ ಪ್ರಧಾನಿ ತಮ್ಮ ಅಧಿಕಾರಾವಧಿಯಲ್ಲಿ ಕನಿಷ್ಟ ಕೆಲಸಗಳನ್ನು ಸಹಾ ಮಾಡಿಲ್ಲ ಎಂದು ಕಿಡಿಕಾರಿದರು.

ಈ ಬಾರಿಯ ಚುನಾವಣೆ ಬಿಜೆಪಿಯ ಸುಳ್ಳು ಹಾಗೂ ಕಾಂಗ್ರೆಸ್‌ನ ಸತ್ಯದ ನಡುವಿನ ಚುನಾವಣೆಯಾಗಿದೆ. ದಾವಣಗೆರೆಯಲ್ಲಿ ಜಿಎಂ ಸಿದ್ದೇಶ್ವರ ಸೋಲುವುದು ಖಚಿತವಾದ ಹಿನ್ನಲೆ ಯಡಿಯೂರಪ್ಪ ಕಾಲಿಗೆ ಬಿದ್ದು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಎಂಪಿ ಗಳು ಕೋಲೆ ಬಸವ ಇದ್ದಂತೆ ರಾಜ್ಯದಲ್ಲಿ ಭೀಕರ ಬರ, ನೆರೆ ಬಂದಾಗಲೂ ಕೇಂದ್ರದ ವಿರುದ್ಧ ತುಟಿ ಬಿಚ್ಚಲಿಲ್ಲ. ಬದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಬರಗಾಲದ ಪರಿಹಾರಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡದೇ ಇದ್ದರೂ ಸಹಾ ಈ ಎಂಪಿಗಳು ಯಾವುದೇ ಮಾತು ಆಡಿಲ್ಲ. ಇವರು ಎಂಪಿಗಳಾಗಿರುವುದು ಕೇವಲ ʼಟಿಎ ಡಿಎʼ ತೆಗೆದುಕೊಳ್ಳುವುದಕ್ಕಾ? ಎಂದು ಎಂಪಿಗಳ ಮೌನವನ್ನು ಪ್ರಶ್ನಿಸಿದರು.

ನನ್ನನ್ನು ಕಂಡಾಗಲೆಲ್ಲಾ ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ. ಮೋದಿ ಅವರಿಗೆ ಉದ್ಯೋಗ ಕೊಟ್ಟಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಇದು ಅದಾನಿ-ಅಂಬಾನಿ ದೇಶವಲ್ಲ 140 ಕೋಟಿ ಭಾರತೀಯರ ದೇಶವಾಗಿದೆ. ಮೋದಿ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅಕ್ಕಿ ನೀಡಲಿಲ್ಲ. ನಮ್ಮ ಸರ್ಕಾರ 1.18 ಕೋಟಿ ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು ಸಿಎಂ ಸಿದ್ದರಾಮಯ್ಯ.