ಬೆಂಗಳೂರು: ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ನಾನು ಬಗೆಹರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ಅವರನ್ನು ರಾಯಚೂರಿಗೆ ಆಗಮಿಸಲು ನಾನು ಕರೆದಿದ್ದೆ. ಆದರೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಹಾಗಾಗಿ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ 25ಕ್ಕೆ ಬಂದು ತಮ್ಮನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ನಾನು ಚರ್ಚೆ ಮಾಡುತ್ತೇನೆ ಎಂದರು.
ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೊಂದಿಗೂ ಚರ್ಚೆ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವುದೂ ಇಲ್ಲ. ಬಜೆಟ್‌ನಲ್ಲಿ ಆ ರೀತಿ ಪ್ರಸ್ತಾಪಗಳಿರುವುದಿಲ್ಲ. ರಾಜು ಕಾಗೆ ಅವರಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವ ರೂಪದಲ್ಲಿ ಕೊಡಲಾಗಿದೆಯೋ ಗೊತ್ತಿಲ್ಲ. ಅಗತ್ಯ ಇರುವ ಕಡೆಗೆ ವಿಶೇಷವಾಗಿ ಅನುದಾನ ನೀಡಬೇಕಾಗುತ್ತದೆ. ಆದರೆ ಮುಖ್ಯಮಂತ್ರಿಯವರ ಅನುದಾನ ಎಂದು ಯಾವುದೂ ಇಲ್ಲ ಎಂದರು.





