ಬೆಂಗಳೂರು: ಖಾಸಗಿ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ಅಲ್ಲಿಗೆ ಹೋಗದೇ ಹೆಚ್ಚು ಕಡಿಮೆ ಒಂದು ವರ್ಷವಾಗಿತ್ತು. ದೆಹಲಿಯಲ್ಲಿ ತಮ್ಮ ಕಾಂಗ್ರೆಸ್ ಕೇಂದ್ರ ಕಚೇರಿ ಇರುವುದರಿಂದ ಕೇಂದ್ರ ಕಚೇರಿಗೂ ಭೇಡಿ ನೀಡುವುದು ವಾಡಿಕೆ. ಹೀಗಾಗಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಇದೇ ವೇಳೆ ತಮ್ಮ ಬೆಂಬಲಿಗರು ತಾವು ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ನಾನು ಅದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯಗಳ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲ್ಲ. ನಮ್ಮ ಪಕ್ಷದ ಸಾಮಾನ್ಯ ನಿಯಮವೆಂದರೆ ನಮ್ಮ ಭಾವನೆಗಳನ್ನು ಹೈಕಮಾಂಡ್ ಬಳಿ ವ್ಯಕ್ತಪಡಿಸುವುದು. ಇದನ್ನು ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಮಾಡುತ್ತಿದ್ದಾರೆ. ನಾನು ಸೇರಿದಂತೆ ಎಲ್ಲರೂ ಅದನ್ನೇ ಮಾಡುತ್ತೇವೆ ಎಂದು ಹೇಳಿದರು.