ಬೆಂಗಳೂರು: ಬಡವರ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಲಂಚ ನೀಡಬೇಕು ಎಂದು ಗಂಭೀರ ಆರೋಪ ಮಾಡಿದ್ದ ಆಡಳಿತ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ತಮ್ಮ ಹೇಳಿಕೆಯನ್ನು ಇಂದು ಮತ್ತೆ ಪುನರ್ ದೃಢೀಕರಿಸಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಡಿಯೋದಲ್ಲಿ ಮಾತನಾಡಿರುವುದು ನಾನೇ. ನಾನು ಸತ್ಯವನ್ನೇ ಹೇಳಿದ್ದೇನೆ. ನಡೆಯುತ್ತಿರುವುದನ್ನು ಜನರಿಗೆ ತಿಳಿಸಿದ್ದೇನೆ. ಜನಪರ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಾವು ಅದರಂತೆ ನಡೆದುಕೊಳ್ಳಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದಿದ್ದಾರೆ.
ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ನಾನು ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಮುಖ್ಯಮಂತ್ರಿಯವರು ಏನು ಮಾಡುತ್ತಾರೋ ಗೊತ್ತಿಲ್ಲ. ಒಂದು ವೇಳೆ ಅವರು ನನ್ನನ್ನು ಕರೆದರೆ ಹೋಗಿ ಮಾತನಾಡುತ್ತೇನೆ. ಈವರೆಗೂ ಅವರು ನನ್ನನ್ನು ಕರೆದಿಲ್ಲ. ನಾನಾಗಿಯೇ ಹೋಗುವುದಿಲ್ಲ. ಎಲ್ಲಾ ಸರ್ಕಾರಗಳಲ್ಲೂ ಭ್ರಷ್ಟಾಚಾರ ಸಾಮಾನ್ಯ. ನಾವು ಜನಪರ ಆಡಳಿತ ನೀಡುತ್ತೇವೆಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿರುವವರು. ನಮ್ಮ ಅವಧಿಯಲ್ಲಿ ಈ ರೀತಿಯಾಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ಷೇತ್ರದ ಐದಾರು ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರಕ್ಕೆ 2 ಸಾವಿರ ಮನೆಗಳಿಗಾಗಿ ಬೇಡಿಕೆಯಾಗಿತ್ತು. 1,950 ಮನೆಗಳನ್ನು ಮಂಜೂರು ಮಾಡಲಾಗಿದೆ. ನಾನು ನೀಡಿದ ಪತ್ರಗಳಿಗೆ ಮನೆಗಳನ್ನು ಕೊಟ್ಟಿಲ್ಲ. ಪಂಚಾಯಿತಿ ಅಧ್ಯಕ್ಷರು ನೀಡಿದ ಪತ್ರಗಳಿಗೆ ಮನೆಗಳು ಸಿಕ್ಕಿವೆ. ನನಗಿಂತಲೂ ಕ್ಷೇತ್ರದಲ್ಲಿ ಪಂಚಾಯಿತಿ ಅಧ್ಯಕ್ಷರು ಪ್ರಬಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.





